ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕ ಕ್ಷೇತ್ರಕ್ಕೆ ಸೋಮವಾರ ಚುನಾವಣೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಶೇ.80ಕ್ಕೂ ಹೆಚ್ಚು ಮತದಾನವಾಗಿದೆ. ಬೆಳಗ್ಗೆ ವೇಳೆ ಮಂದವಾಗಿ ಸಾಗಿದ ಮತ ಚಲಾವಣೆ ಮಧ್ಯಾಹ್ನದ ಮೇಲೆ ಚುರುಕುಗೊಂಡಿತ್ತು. ಕೆಲವು ಮತಗಟ್ಟೆಗಳಲ್ಲಿ ಕೊನೆ ಕ್ಷಣದವರೆಗೂ ಜನರು ಸರತಿಯಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ.ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.88.04ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 2558 ಪುರುಷ ಮತದಾರರು, 1807 ಮಹಿಳಾ ಮತದಾರರಿದ್ದರು. ಈ ಪೈಕಿ, 2320 ಪುರುಷರು, 1523 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಶೇ.80.61ರಷ್ಟು ಮತದಾನವಾಗಿದೆ. ಒಟ್ಟು 15578 ಪುರುಷರು, 11833 ಮಹಿಳಾ ಮತದಾರರು ನೋಂದಾಯಿಸಿದ್ದರು. ಈ ಪೈಕಿ, 12922 ಪುರುಷ, 9176 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.
ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು:ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಪತ್ನಿ ನಮಿತಾ ಸರ್ಜಿ ಅವರೊಂದಿಗೆ ತೆರಳಿ ಸೋಮವಾರ ಬೆಳಗ್ಗೆ ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದ ಮತಕೇಂದ್ರದಲ್ಲಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,
ನೈಋ ತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ದಲ್ಲಿ ತಾವು ಮತ್ತು ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡರ ಗೆಲುವು ಖಚಿತ ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ, ಜೆಡಿಎಸ್ ನಾಯಕ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಚ್. ಮಾಲತೇಶ್, ಅನಿತಾ ರವಿಶಂಕರ್ ಮತ್ತಿತರರಿದ್ದರು.ಇದಕ್ಕೂ ಮೊದಲು ಡಾ.ಧನಂಜಯ ಸರ್ಜಿ ತಂದೆ ಸರ್ಜಿ ರುದ್ರಪ್ಪ ಹಾಗೂ ತಾಯಿ ರೇಣುಕಮ್ಮ ಹಾಗೂ ಸಂಘ ಪರಿವಾರ ಪ್ರಮುಖರಾದ ಭಾ.ಮ. ಶ್ರೀಕಂಠಯ್ಯ ಮತ್ತು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಆಶೀರ್ವಾದ ಪಡೆದರು.ಕೈ ಅಭ್ಯರ್ಥಿಗಳಿಗೆ ಗೆಲುವು:
ಬಾಲರಾಜ ಅರಸ್ ರಸ್ತೆಯಲ್ಲಿ ಪಿಡಬ್ಲ್ಯುಡಿ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಐದು ಜಿಲ್ಲೆಯಲ್ಲಿ ಮತದಾನ ಬಿರುಸಾಗಿದೆ. ಕಾಂಗ್ರೆಸ್‌ನ ಪ್ರಣಾಳಿಕೆ ಮತ್ತು ಕಾರ್ಯವೈಖರಿ ಗಮನಿಸಿ ತಮ್ಮ ಪರವಾಗಿ ಮತ ಚಲಾಯಿಸುತ್ತಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಮಂಜುನಾಥ್ ಅವರೂ ಗೆಲುವು ಸಾಧಿಸಲಿದ್ದಾರೆ ಎಂದರು.ಡಿವಿಎಸ್ ಹೈಸ್ಕೂಲ್‌ನಲ್ಲಿ ಎಸ್‌ಪಿ ದಿನೇಶ್ ಮತ ಚಲಾವಣೆ:
ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ವಿನೋಬನಗರದ ಡಿವಿಎಸ್ ಹೈಸ್ಕೂಲ್‌ನಲ್ಲಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿದ್ದೆ. ಮತದಾರರಿಂದ ತಮ್ಮ ಪರವಾಗಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಪಕ್ಷದ ವಿರುದ್ಧ ಚುನಾವಣೆ ನಡೆಸುವುದು ಸುಲಭವಲ್ಲ. ಅದರೆ ಎರಡು ಬಾರಿ ಇದೇ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದರಿಂದ ಮತದಾರರಿಗೆ ತಮ್ಮ ಪರ ಒಲವಿದೆʼ ಎಂದರು.ಮತ ಚಲಾಯಿಸಿದ ಸ್ವಾಮೀಜಿ:
ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಶಿವಮೊಗ್ಗದಲ್ಲಿ ಮತ ಚಲಾಯಿಸಿದರು.ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ರಾಮಣ್ಣ ಸೇರಿಹಲವರು ಮತ ಚಲಾಯಿಸಿದರು.