ಉಪ್ಪಿನಂಗಡಿ: ಧಾರ್ಮಿಕ ನಂಬಿಕೆ, ಕೃಷಿ ಅಭಿವೃದ್ಧಿ ವಿಚಾರಗಳ ನಡುವೆ ಅನಾದಿಕಾಲದಿಂದಲೂ ಆಚರಿಸುತ್ತಿದ್ದ ನೇತ್ರಾವತಿ ನದಿ ಗರ್ಭದ ಉದ್ಭವ ಲಿಂಗಕ್ಕೆ ಸಲ್ಲಿಸಬೇಕಾಗಿದ್ದ ಶಿವರಾತ್ರಿಯ ಪೂಜೆ ಪುನಸ್ಕಾರಗಳು ನಿಂತಿದ್ದು ನೋವಾಗಿದೆ.
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ತಾಣ. ಇಲ್ಲಿ ನೇತ್ರಾವತಿ ಒಡಲಲ್ಲಿ ಶಿವ ಉದ್ಭಲಿಂಗ ರೂಪದಲ್ಲಿ ಪೂಜಿಸಲ್ಪಡುತ್ತಿದ್ದ. ಇದು ಅನಾದಿ ಕಾಲದಿಂದ ಅರ್ಥಾತ್ ಪುರಾಣ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಧಾರ್ಮಿಕ ವಿಧಿ ವಿಧಾನ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಳಿಯೂರು ಪ್ರದೇಶದಲ್ಲಿ ಅಣೆಕಟ್ಟು ಸಹಿತ ಸೇತುವೆ ನಿರ್ಮಿಸಿದಾಗ ಉದ್ಭವಲಿಂಗದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಆಗ ಅಣೆಕಟ್ಟಿನ ಹಿನ್ನೀರು ನೆಕ್ಕಿಲಾಡಿ ವರೆಗೆ ಮಾತ್ರ ಸಂಗ್ರಹಗೊಳ್ಳುತ್ತದೆ ಎಂದು ತಿಳಿಸಲಾಗಿತ್ತು. ಅಣೆಕಟ್ಟು ಪೂರ್ಣಗೊಂಡಾಗ ಸರ್ಕಾರ ಬದಲಾಗಿತ್ತು. ಹಿನ್ನೀರು ನೀರು ನೆಕ್ಕಿಲಾಡಿಯಿಂದ ಉಪ್ಪಿನಂಗಡಿ ವರೆಗೆ ಸಂಗ್ರಹಗೊಂಡಿತ್ತು. ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸದಂತಾದರೆ ಜನ ಪ್ರತಿಭಟನೆ ನಡೆಸುವರು ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಹಾಗಾಗಲಿಲ್ಲ. ನದಿ ತುಂಬ ನೀರು ತುಂಬಿರುವುದು. ನದಿ ಭಾಗದ ಕೃಷಿಕರಿಗೆ ಮೇಲ್ಮಟ್ಟದಲ್ಲೇ ನೀರು ಲಭಿಸಿರುವುದು ಸಂತಸ ತಂದಿದ್ದು, ಬೇರಾವ ಭಾವನೆಗಿಂತ ಕೃಷಿಕರ ಹಿತವೇ ಪ್ರಧಾನವೆಂದಾಯಿತು. ಉದ್ಭವಲಿಂಗದ ಪೂಜೆಗಾಗಿ ಹೋರಾಟಕ್ಕಿಳಿದರೆ ಜನಬೆಂಬಲ ದೊರೆಯದೆಂದು ಭಾವಿಸಿ ಎಲ್ಲರೂ ಮೌನವಾದರು. ಶತಶತಮಾನಗಳಿಂದ ಪೂಜಿಸಿಕೊಂಡು ಬಂದ ಪರಂಪರೆ ಸದ್ದಿಲ್ಲದೆ ಸ್ಥಗಿತಗೊಂಡಿತು. ಈ ವರ್ಷದ ಶಿವರಾತ್ರಿಯ ಪೂಜೆಯೂ ಸೇರಿದಂತೆ ಸತತ ಮೂರುವರ್ಷಗಳ ಕಾಲ ಪೂಜೆ ಇಲ್ಲದೆ ಉದ್ಭವಲಿಂಗ ಜಲಾವೃತವಾಯಿತು. ದೇವಳದಲ್ಲಿ ನಡೆಸಲಾದ ಎಲ್ಲಾ ಪ್ರಶ್ನಾ ಚಿಂತನೆಯಲ್ಲಿಯೂ ಉದ್ಭಲಿಂಗ ಕ್ಕೆ ಪೂಜೆ ನಿಂತಿರುವುದು ಊರಿಗೆ ದೋಷ ಎಂದು ತಿಳಿಸಲಾಯಿತು. ಆದರೆ ಕೃಷಿಕರ ಹಿತದ ಮುಂದೆ ಊರಿನ ದೋಷ ಗೌಣವಾಯಿತು.
ಶಾಂತವಾಗಿ ಹರಿಯುವ ನೇತ್ರಾವತಿ ನದಿ. ಸ್ಥಳಾವಕಾಶದ ಕೊರತೆ ಕಾಣದಂತೆ ನದಿಯ ಮರಳ ಒಡಲ ಬಯಲಿನಲ್ಲಿ ಜಾತ್ರೆಯ ವಿವಿಧ ಕಾರ್ಯಕ್ರಮಗಳು, ಭಕ್ತಿಯ ನೆಲೆಯಲ್ಲಿ ನಡೆಯುವ ಉದ್ಭವಲಿಂಗದ ಪೂಜೆ ಪುನಸ್ಕಾರಗಳು, ನಸುಕಿನಲ್ಲಿ ನಡೆಯುತ್ತಿದ್ದ ಹರಿಯುವ ನದಿಯಲ್ಲಿನ ಪುಣ್ಯ ತೀರ್ಥ ಸ್ನಾನ ಎಲ್ಲಕ್ಕೂ ಪಾರಂಪರಿಕ ಸೊಬಗಿತ್ತು. ಸಂಭ್ರಮವಿತ್ತು. ಆದರೆ ಪ್ರಸಕ್ತ ಅಣೆಕಟ್ಟಿನ ಕಾರಣಕ್ಕೆ ನಿಂತ ನೀರು ಅದಕ್ಕೆ ನೇರವಾಗಿ ಹರಿದು ಸೇರುವ ತ್ಯಾಜ್ಯ ನೀರು, ದುರ್ಗಂಧ ಭರಿತ ನೀರನ್ನು ತೀರ್ಥ, ಪುಣ್ಯ ಸ್ನಾನ ಎನ್ನುವುದೇ. ಜಾತ್ರೆಯ ಎಲ್ಲಾ ಕಾರ್ಯಕ್ರಮಗಳು ದೇವಳದ ಪರಿಸರದಲ್ಲೇ ನಡೆಸಬೇಕಾದ್ದರಿಂದ ಸಹಜವಾಗಿ ಸ್ಥಳಾವಕಾಶದ ಕೊರತೆ. ಕೃಷಿಕರಿಗೆ ಲಾಭವಾಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಎಲ್ಲವೂ ಅಯೋಮಯ.
ಕೃಷಿಕರ ಹಿತಕಾಯುತ್ತಾ ಧಾರ್ಮಿಕ ಭಾವನೆಯನ್ನು ಗೌರವಿಸಲು ಸಾಧ್ಯ
ಕಳೆದ ಮೂರು ವರ್ಷಗಳ ಹಿಂದೆಯೂ ಈ ಪರಿಸರದಲ್ಲಿ ಕೃಷಿ ಚಟುವಟಿಕೆಗಳು ಚೆನ್ನಾಗಿಯೇ ನಡೆದಿತ್ತು. ಮಂಗಳೂರಿನ ಜನತೆಗೆ ಕುಡಿಯುವ ನೀರು ಸರಬರಾಜಿನಲ್ಲಿ ನೀರಿನ ಕೊರತೆ ಕಾಡಂತೆ ಹೆಚ್ಚುವರಿ ಜಲಾಶಯವಾಗಿ ಬಿಳಿಯೂರು ಎಂಬಲ್ಲಿ ಅಣೆಕಟ್ಟು ಕಟ್ಟಿದ ಕಾರಣಕ್ಕೆ ಕೃಷಿ ಕಾರ್ಯಗಳು ಪ್ರಾರಂಭಗೊಂಡಿರುವುದಲ್ಲ. ಡಿಸೆಂಬರ್ ತಿಂಗಳಲ್ಲಿಯೇ ಹಿನ್ನೀರು ಸಂಗ್ರಹಿಸುವುದರಿಂದ ನದಿ ಪಾತ್ರದ ಕೃಷಿಕರಿಗೆ ಅನುಕೂಲವಾಗಿರುವುದು ನಿಜ. ಆದರೆ ನಿಜವಾಗಿಯೂ ನೀರಿನ ಅಗತ್ಯತೆ ಇರುವ ಎಪ್ರಿಲ್ ಮೇ ತಿಂಗಳ ಅವಧಿಗೆ ಮಾರ್ಚ್ ತಿಂಗಳ ನಂತರ ಹರಿಯುವ ನೀರನ್ನು ತಡೆದು ನಿಲ್ಲಿಸಿದರೆ ಎರಡೂ ಉದ್ದೇಶಗಳೂ ಈಡೇರಿಸಲ್ಪಡುತ್ತಿದ್ದವು.
ಡ್ರೋಣ್ ಚಿತ್ರೀಕರಣವನ್ನು ವೀಕ್ಷಿಸಿದ ಬಳಿಕ ಉಪ್ಪಿನಂಗಡಿ ಒಂದು ಶ್ರೀಲಂಕಾ ದೇಶದಂತೆ ನದಿದಂಡೆಯಲ್ಲಿನ ದ್ವೀಪದಂತಿರುವುದು ಗೋಚರಿಸಿದೆ. ಇಲ್ಲಿ ಇಂಗು ಗುಂಡಿ ಪರಿಣಾಮಕಾರಿಯಲ್ಲ. ಸಹಜವಾಗಿ ತ್ಯಾಜ್ಯ ನೀರು ನದಿಯನ್ನು ಸೇರುವಂತಾಗಿದೆ. ಮೇಲಾಗಿ ಇದೀಗ ಶೌಚಾಲಯದ ಫಿಲ್ಟರ್ ನೀರೂ ಕೂಡ ನದಿ ಸೇರುತ್ತಿರುವುದರಿಂದ ತೀರ್ಥ ಸ್ನಾನಕ್ಕೆ ಪ್ರಾಧಾನ್ಯತೆ ಇರುವ ಸಂಗಮ ಸ್ಥಳ ಮಲೀನವಾಗುತ್ತಿರುವ ಬಗ್ಗೆ ಬೇಸರವಿದೆ. ಶಾಸಕರು ನದಿ ನೀರಿನ ಶುದ್ಧತೆಗಾಗಿ ಹಲವು ಯೋಜನೆಗಳನ್ನು ಹಾಕುತ್ತಿದ್ದಾರೆ. ಅದಾಗ್ಯೂ ಉಪ್ಪಿನಂಗಡಿಯ ಪ್ರಾಕೃತಿಕ ಸೊಬಗಿನ ಜಾತ್ರೆಯು ನದಿಯ ಒಡಲಿನಲ್ಲಿಯೇ ನಡೆದ ಚಂದ. ಈ ನಿಟ್ಟಿನಲ್ಲಿ ಜಾತ್ರೋತ್ಸವ ಮುಗಿದ ಬಳಿಕ ಅಣೆಕಟ್ಟಿನಲ್ಲಿ ಈ ಪ್ರಮಾಣದಲ್ಲಿ ಹಿನ್ನೀರು ಸಂಗ್ರಹಿಸುವತ್ತ ಗಮನಹರಿಸಿದರೆ ಒಳೆಯದಿತ್ತು. ಮುಂದಿನ ದಿನಗಳಲ್ಲಿ ಮುಗೇರಡ್ಕ ಅಣೆಕಟ್ಟಿನಲ್ಲಿ ಹಿನ್ನೀರು ಸಂಗ್ರಹಣೆ ಗೊಂಡ ಬಳಿಕ ಬಿಳಿಯೂರು ಅಣೆಕಟ್ಟಿನಲ್ಲಿ ಹಿನ್ನೀರು ಸಂಗ್ರಹಿಸುವ ಕಾಲಮಿತಿ ಬದಲಾಯಿಸಬಹುದಾಗಿದೆ.
ಯು. ಟಿ. ಮಹಮ್ಮದ್ ತೌಷಿಪ್ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಉಪ್ಪಿನಂಗಡಿಯಲ್ಲಿನ ಉದ್ಭವಲಿಂಗದ ಮಹತ್ವ ಪುರಾಣ ಕಾಲದಿಂದಲೂ ಉಲ್ಲೇಖಿಸಲ್ಪಟ್ಟಿದೆ. ಈ ನಿಟ್ಟಿನಲ್ಲಿ ಉದ್ಭವಲಿಂಗಕ್ಕೆ ಶಿವರಾತ್ರಿಯ ಪೂಜೆ ನಿರಾತಂಕವಾಗಿ ನಡೆಯುವಂತಾಗಬೇಕು. ಹಾಗೂ ನದಿ ನೀರು ಶುದ್ಧತೆಯ ಬಗ್ಗೆ ನಾಗರಿಕ ಕರ್ತವ್ಯ ಪಾಲನೆಯಾಗಬೇಕು. ಎಲ್ಲಾ ವಿಭಾಗದ ಅಭಿವೃದ್ಧಿಯ ನಿಟ್ಟಿನಲ್ಲಿ ಧಾರ್ಮಿಕ ನಂಬಿಕೆಗಳನ್ನು ಗೌರವದೊಂದಿಗೆ ಉಳಿಸುವ ಹೊಣೆಗಾರಿಕೆ ನಮ್ಮದಾಗಿದೆ.
ಕೈಲಾರ್ ರಾಜಗೋಪಾಲ ಭಟ್, ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ