ಉಪ್ಪಿನಂಗಡಿ: ಹಲವಾರು ಖಾಸಗಿ ಕಾರ್ಯಕ್ರಮಗಳ ಕಾರಣದಿಂದಾಗಿ ಜನರ ವಾಹನ ಸಂಚಾರ ಕಳೆದ ಕೆಲ ದಿನಗಳಿಂದ ಹೆಚ್ಚುತ್ತಿದೆ. ಪರಿಣಾಮ ಉಪ್ಪಿನಂಗಡಿಯ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಈ ಬಗ್ಗೆ ಸ್ಥಳೀಯ ವರ್ತಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದಂತೆಯೇ ಸ್ಥಳೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಸಮಸ್ಯೆಯ ಸೂಕ್ಷ್ಮತೆಯನ್ನು ಪೊಲೀಸ್ ವೃತ್ತನಿರೀಕ್ಷಕರ ಗಮನಕ್ಕೆ ತಂದರು. ಅನಧಿಕೃತ ವ್ಯಾಪಾರ: ಉಪ್ಪಿನಂಗಡಿ ಅಂಡರ್‌ಪಾಸ್‌ನಲ್ಲಿ ಅನಧಿಕೃತವಾಗಿ ವಾಹನಗಳಲ್ಲಿ ಸರಂಜಾಮುಗಳನ್ನು ತಂದಿರಿಸಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಡೆ ತಡೆ ಎದುರಾಗಿದೆ ಎಂಬುದು ಜನರ ಆರೋಪ
ಕಾನೂನು ಹೋರಾಟ ಎಚ್ಚರಿಕೆ: ಈಗಾಗಲೇ ವರ್ತಕರಿಂದ ವ್ಯಾಪಕ ದೂರುಗಳು ಬಂದಿದ್ದು, ವಾಹನ ದಟ್ಟಣೆ ಸಮಸ್ಯೆಯಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವರಿಕೆ ಮಾಡಲಾಗಿದೆ. ಠಾಣೆಯ ಸನಿಹದಲ್ಲೆ ಈ ರೀತಿ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗದೆ ಇದ್ದಲ್ಲಿ ಕಾನೂನು ಹೋರಾಟ ನಡೆಸಲು ಸಂಘದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ತಿಳಿಸಿದರು.