ಉಪ್ಪಿನಂಗಡಿ: ಶಾಲಾ ವಿದ್ಯಾರ್ಥಿಗಳ ಕವನ ಸಂಕಲನ ಬಿಡುಗಡೆ

KannadaprabhaNewsNetwork | Published : Apr 10, 2025 1:18 AM

ಸಾರಾಂಶ

ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯಲ್ಲಿ ಸಿರಿಸಿಂಗಾರ ಸಾಹಿತ್ಯ ಸಂಘದ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ರಚಿತವಾದ ಕವನ ಸಂಕಲನಗಳ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಮಂಗಳವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಎಳೆಯ ಮನಸ್ಸುಗಳನ್ನು ಪ್ರೋತ್ಸಾಹದ ನುಡಿಗಳೊಂದಿಗೆ ಪ್ರೇರಣೆ ನೀಡಿದರೆ ಮಕ್ಕಳಲ್ಲಿನ ಸಾಹಿತ್ಯಾಸಕ್ತಿ ಅರಳಿಸಿ ಪ್ರಕಾಶಿಸಲು ಸಾಧ್ಯ ಎನ್ನುವುದನ್ನು ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯ ಸಿರಿಸಿಂಗಾರ ಸಾಹಿತ್ಯ ಸಂಘವು ಸಾಧಿಸಿ ತೋರಿಸಿದೆ ಎಂದು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.

ಮಂಗಳವಾರ ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯಲ್ಲಿ ಸಿರಿಸಿಂಗಾರ ಸಾಹಿತ್ಯ ಸಂಘದ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ರಚಿತವಾದ ಕವನ ಸಂಕಲನಗಳ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಯತ್ನ, ಭಯ, ಆಸೆ, ನಿರಾಸೆ, ಮೊದಲಾದವುಗಳಿಂದ ಕೂಡಿದ ಎಳೆಯ ಮನಸ್ಸುಗಳನ್ನು ಪ್ರೋತ್ಸಾಹದ ಮಾತು ಮತ್ತು ಧನಾತ್ಮಕ ಸ್ಪಂದನೆ ದೊರೆತರೆ ಸಾಧನೆಯತ್ತ ಸಾಗಬಹುದೆನ್ನುವುದಕ್ಕೆ ಶ್ರೀ ರಾಮ ಶಾಲಾ ವಿದ್ಯಾರ್ಥಿನಿಯರಾದ ಕಾವ್ಯಶ್ರೀ ಮತ್ತು ಶಿವಾನಿ ಚೊಚ್ಚಲ ಕೃತಿಗಳೇ ಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ಹಿಂಗಾರ ಅರಳಿಸಿ ಕೃತಿ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಪ್ರೊ. ವಿ ಬಿ ಅರ್ತಿಕಜೆ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಪ್ರೋತ್ಸಾಹ ನೀಡಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಿದ ಪರಿಣಾಮ ಈ ಎಳೆ ವಯಸ್ಸಿನ ಮಕ್ಕಳಿಂದ ಕವನ ಸಂಕಲನ ರಚಿಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ಶಿಕ್ಷಕಿಯರ ಪಾತ್ರ ಶ್ಲಾಘನೀಯ ಎಂದರು.

ಶಾಲಾಡಳಿತದ ಅಧ್ಯಕ್ಷ ಸುನಿಲ್ ಅನಾವು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಎಂಜಿರಪಳಿಕೆ ಕಾರ್ಯಕ್ರಮ ಉದ್ಘಾಟಿಸಿದರು.

ಶಾಲಾ ಸಂಚಾಲಕ ಯು ಜಿ ರಾಧಾ, ನಿವೃತ್ತ ಉಪನ್ಯಾಸಕ ಮಹಾಲೀಂಗೇಶ್ವರ ಭಟ್, ಶಾಲಾಡಳಿತದ ಉಪಾಧ್ಯಕ್ಷೆ ಅನುರಾಧಾ ಆರ್ ಶೆಟ್ಟಿ, ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು, ಪ್ರೌಡಾ ಶಾಲಾ ವಿಭಾಗದ ಮುಖ್ಯ ಗುರು ರಘುರಾಮ ಭಟ್, ಪ್ರಾಥಮಿಕ ವಿಭಾಗದ ಮುಖ್ಯ ಗುರು ವಿಮಲಾ ತೇಜಾಕ್ಷಿ ಇದ್ದರು.

Share this article