ಉಪ್ಪಿನಂಗಡಿ: ಸುಬ್ರಹ್ಮಣ್ಯ ಕ್ರಾಸ್ ಬಳಿ ಎತ್ತರಿಸಿದ ರಸ್ತೆ ಸಂಚಾರಕ್ಕೆ ಮುಕ್ತ

KannadaprabhaNewsNetwork | Published : Mar 4, 2025 12:35 AM

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚತುಷ್ಪಥ ಕಾಮಗಾರಿ ಪ್ರಸಕ್ತ ವೇಗವಾಗಿ ನಡೆಯುತ್ತಿದ್ದು, ಉಪ್ಪಿನಂಗಡಿಯ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಎರಡು ಎತ್ತರಿಸಿದ ರಸ್ತೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ಪೈಕಿ ಸುಬ್ರಹ್ಮಣ್ಯ ಕ್ರಾಸ್ ಬಳಿಯ ಎತ್ತರಿಸಿದ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚತುಷ್ಪಥ ಕಾಮಗಾರಿ ಪ್ರಸಕ್ತ ವೇಗವಾಗಿ ನಡೆಯುತ್ತಿದ್ದು, ಉಪ್ಪಿನಂಗಡಿಯ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಎರಡು ಎತ್ತರಿಸಿದ ರಸ್ತೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ಪೈಕಿ ಸುಬ್ರಹ್ಮಣ್ಯ ಕ್ರಾಸ್ ಬಳಿಯ ಎತ್ತರಿಸಿದ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಸುಬ್ರಹ್ಮಣ್ಯ ಕ್ರಾಸ್ ಬಳಿಯ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯ ಶೇ 90 ರಷ್ಟು ಪೂರ್ಣಗೊಂಡಿದ್ದು, ಹೆದ್ದಾರಿಗೆ ಸಂಪರ್ಕ ಬೆಸೆಯುವ ಸ್ಥಳದಲ್ಲಿನ ಕಾಂಟ್ರಿಕ್‌ ಕಾಮಗಾರಿ ನಡೆಯುತ್ತಿದೆ. ಈ ಮಧ್ಯೆ ಎತ್ತರಿಸಿದ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ಕಾರಣ ಸುಬ್ರಹ್ಮಣ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವಾಹನಗಳು ಇದರಲ್ಲೇ ಸಾಗುವುದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ. ಸುಬ್ರಹ್ಮಣ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸರ್ವೀಸ್ ರಸ್ತೆಯನ್ನು ಬಳಸಿ ಅಂಡರ್ ಪಾಸ್ ಮೂಲಕ ಸುಬ್ರಹ್ಮಣ್ಯ ರಸ್ತೆಯನ್ನು ಸಂಪರ್ಕಿಸಬಹುದಾಗಿದೆ.

ಇತ್ತ ಉಪ್ಪಿನಂಗಡಿ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಈ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಪ್ರಸಕ್ತ ಎತ್ತರಿಸಿದ ರಸ್ತೆ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಎಲ್ಲ ವಾಹನಗಳು ಸರ್ವೀಸ್ ರಸ್ತೆಯನ್ನವಲಂಬಿಸಿ ಸಂಚರಿಸುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗಿರುವ ದಿನಗಳಲ್ಲಿ ವಾಹನ ದಟ್ಟಣೆ ಕಾಣಿಸುತ್ತಿದೆ.

ಕಗ್ಗಂಟಾಗಿರುವ ಚರಂಡಿ:

ಉಪ್ಪಿನಂಗಡಿ ಪೇಟೆಯಿಂದ ಹರಿದು ಬರುತ್ತಿರುವ ದ್ರವ ತ್ಯಾಜ್ಯ ನೀರು ರಾಜಕಾಲುವೆ ಮೂಲಕ ಹೆದ್ದಾರಿ ದಾಟಿ, ನಟ್ಟಿಬೈಲು ಪರಿಸರದಲ್ಲಿ ಹರಿದು ಕುಮಾರಧಾರಾ ನದಿ ಸೇರುತ್ತದೆ. ಆದರೆ ಹೆದ್ದಾರಿ ದಾಟಿ ನಟ್ಟಿಬೈಲು ಪರಿಸರದಲ್ಲಿ ಸಂಗ್ರಹಣೆಗೊಂಡಿರುವ ಚರಂಡಿ ನೀರು ಮುಂದಕ್ಕೆ ಹರಿಯಲಾಗದೆ ಸಮಸ್ಯೆ ಸೃಷ್ಟಿಸಿದೆ.

ನಟ್ಟಿಬೈಲು ಪರಿಸರದಲ್ಲಿ ಹೆದ್ದಾರಿ ಇಲಾಖೆಯವರು ತಡೆಗೋಡೆ ನಿರ್ಮಿಸಿ ಚರಂಡಿಯ ನಿರ್ಮಾಣಕ್ಕೆ ಮುಂದಾಗಿದ್ದರಾದರೂ, ಚರಂಡಿ ನಿರ್ಮಿಸಲು ಬಳಸುವ ಭೂಮಿಯನ್ನು ಭೂ ಸ್ವಾಧೀನಕ್ಕೆ ಒಳಪಡಿಸಿಲ್ಲವೆಂದೂ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸೂಕ್ತ ಪರಿಹಾರಧನ ವಿತರಿಸಿದ ಬಳಿಕವೇ ಕಾಮಗಾರಿ ನಡೆಸಬೇಕೆಂದು ಅಲ್ಲಿನ ಭೂ ಮಾಲೀಕರು ಒತ್ತಾಯಿಸಿದ್ದಾರೆ. ಈ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿದ್ದು, ಮುಂದಿನ ಮಳೆಗಾಲದ ಮುನ್ನ ಈ ಸಮಸ್ಯೆ ಬಗೆಹರಿದು ಚರಂಡಿ ನಿರ್ಮಾಣ ಕಾರ್ಯ ಸಮರ್ಪಕವಾಗಿ ನಡೆಯದಿದ್ದರೆ, ತ್ಯಾಜ್ಯ ನೀರೆಲ್ಲಾ ಮುಂದೆ ಹರಿಯಲಾಗದೆ ಉಪ್ಪಿನಂಗಡಿ ಪೇಟೆಯನ್ನೇ ಸಮಸ್ಯೆಗೆ ತುತ್ತಾಗಿಸಲಿದೆ.

ಈ ನಿಟ್ಟಿನಲ್ಲಿ ಸ್ಥಳೀಯ ಪಂಚಾಯಿತಿ ಆಡಳಿತ ಮತ್ತು ಹೆದ್ದಾರಿ ಇಲಾಖಾಧಿಕಾರಿಗಳು ಸ್ಥಳೀಯ ಭೂ ಮಾಲೀಕರ ವಿಶ್ವಾಸ ಗಳಿಸುವ ಕಾರ್ಯದತ್ತ ಗಮನ ಹರಿಸಬೇಕಾಗಿದೆ.

Share this article