ಉಡುಪಿ: ಇಲ್ಲಿನ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯಿಂದ ನಿರ್ಮಾಣಗೊಳ್ಳುವ ‘ವಯೋವಂದನ ಆತಿಥ್ಯ ಗೃಹ’ ನಿವೇಶನ ಕಚೇರಿಯ ಉದ್ಘಾಟನೆಯನ್ನು ಡಾ. ಪಾಂಗಾಳ ಸೀತಾರಾಮ ನಾಯಕ್ ನೆರವೇರಿಸಿದರು.
ಈ ಸಂದರ್ಭ 80ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಿವಮೊಗ್ಗದ ಉದ್ಯಮಿ ಮಣೂರು ಪ್ರಕಾಶ್ ಪ್ರಭು, ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯದ ಜೊತೆಗೆ ರಾಷ್ಟ್ರ ಮೊದಲು ಎನ್ನುವ ಕಲ್ಪನೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿರುವುದು ಯುವ ಪೀಳಿಗೆಗೆ ಮೇಲ್ಪಂಕ್ತಿ ಹಾಕಿಕೊಟ್ಟಂತಾಗಿದೆ ಎಂದರು.
ವೇದಮೂರ್ತಿ ಹರಿಪ್ರಸಾದ್ ಶರ್ಮಾರ ಪೌರೋಹಿತ್ಯದಲ್ಲಿ ಶ್ರೀ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಮುಖ್ಯ ಅತಿಥಿಯಾಗಿ ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನದ ಆಡಳಿತ ಮೊಕ್ತೇಸರ ವಿನೋದ್ ನಾಯಕ್ ಉಪಸ್ಥಿತರಿದ್ದರು.ಈ ಸಂದರ್ಭ ದಾನಿಗಳಾದ ಮಂಗಳೂರಿನ ರಘುರಾಮ್ ಕಾಮತ್, ಚಂದ್ರಪ್ರಭಾ ಕಾಮತ್, ಉಡುಪಿಯ ಭಾರತ ವಿಕಾಸ ಪರಿಷತ್ ಪ್ರಮುಖರಾದ ವಸಂತ ಭಟ್ ದಂಪತಿ, ಮಣಿಪಾಲದ ಭಾರತ ವಿಕಾಸ್ ಟ್ರಸ್ಟಿನ ಕಾರ್ಯದರ್ಶಿ ಜಗದೀಶ್ ಪೈ, ಬ್ರಹ್ಮಾವರದ ಬಾಲಕೃಷ್ಣ ಪೈ, ಉಡುಪಿಯ ಡಾ. ರಾಮಚಂದ್ರ ಕಾಮತ್ ಕಟ್ಟಡ ನಿರ್ಮಾಣ ಪರಿಸರದಲ್ಲಿ ವೃಕ್ಷಾರೋಪಣೆಗೈದರು.