ಮುಂಡಗೋಡ: ಸೋಮವಾರ ಪಟ್ಟಣದ ಬಂಕಾಪುರ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿಯ ಬೃಹತ್ ಗಾತ್ರದ ಆಲದ ಮರ ಏಕಾಏಕಿ ನೆಲಕ್ಕುರುಳಿದ ಪರಿಣಾಮ ಅಪಾರ ಹಾನಿ ಸಂಭವಿಸಿದೆ.
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಕ್ಕದ ಪಿಎಲ್‌ಡಿ ಬ್ಯಾಂಕ್‌ಗೆ ಸಂಬಂಧಿಸಿದ ಜಾಗದಲ್ಲಿರುವ ಪುರಾತನ ಆಲದ ಮರ ಮೂರು ಭಾಗಗಳಾಗಿ ನೆಲಕ್ಕುರಿಳಿದ್ದು, ಪ್ರಮೋದ್ ಎಂಬವರಿಗೆ ಸೇರಿದ ಗ್ಯಾರೇಜು ಸಂಪೂರ್ಣ ಜಖಂಗೊಂಡಿದೆ. ಗ್ಯಾರೇಜಿನಲ್ಲಿ ರಿಪೇರಿಗೆಂದು ಬಂದಿದ್ದ ಬೈಕ್‌ಗಳು ಜಖಂ ಆಗಿವೆ. ಏರ್ ಕಾಂಪ್ರೆಶರ್‌ಗೆ ಹಾನಿಯಾಗಿದೆ. ಅಲ್ಲದೇ ಗ್ಯಾರೇಜ್ ಎದುರಿಗೆ ನಿಲ್ಲಿಸಿದ್ದ ಹೊಸ ಬೈಕ್ ನಜ್ಜುಗುಜ್ಜಾಗಿದೆ.ಏಕಾಏಕಿ ಮರ ಬಿದ್ದ ಕಾರಣ ಗ್ಯಾರೇಜಿನಲ್ಲಿ ಕುಳಿತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮರ ಬಿದ್ದ ಸುದ್ದಿ ಪಟ್ಟಣದಲ್ಲಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಜನಜಾತ್ರೆ ಉಂಟಾಗಿತ್ತು.
ನಿರ್ಲಕ್ಷ್ಯ ಆರೋಪ:ಹಳೆಯದಾದ ಈ ಆಲದ ಮರ ಬೀಳುವ ಸೂಚನೆ ಇದ್ದಿದ್ದರಿಂದ ಕೆಲ ದಿನಗಳ ಹಿಂದೆಯೇ ಮರವನ್ನು ಕಡಿಯಲು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಮರಕ್ಕೆ ನಂಬರ್ ಕೂಡ ಹಾಕಲಾಗಿತ್ತು. ಅರಣ್ಯ ಇಲಾಖೆಯ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಮರ ಬಿದ್ದು ಅನಾಹುತಕ್ಕೆ ಕಾರಣವಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆಂಜೋಡಿ ಗಲಬಿ ಆರೋಪಿಸಿದ್ದಾರೆ.ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಮೂವರು ಪಾರುದಾಂಡೇಲಿ: ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದ ಕಾರಿಗೆ ತಾಲೂಕಿನ ನಾನಾಕೇಸರೋಡ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟಿದ್ದು, ಅದೃಷವಶಾತ್ ವಾಹನದಲ್ಲಿದ್ದ ಮೂವರು ಪಾರಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.ಕಾರಿನಲ್ಲಿದ್ದವರು ಬೆಳಗಾವಿ ಮೂಲದವರು ಎನ್ನಲಾಗಿದೆ. ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದ ಕಾರಿನಲ್ಲಿ ನಾನಾಕೇಸರೋಡದ ಹತ್ತಿರ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಾರಿನಲ್ಲಿದ್ದ ಮೂವರು ವಾಹನದಿಂದ ಇಳಿದಿದ್ದಾರೆ. ಕೆಲವೇ ಕ್ಷಣದೊಳಗೆ ಕಾರು ಸಂಪೂರ್ಣವಾಗಿ ಸುಟ್ಟಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.