ಶಿವಾನಂದ ಅಂಗಡಿ
ಅಣ್ಣಿಗೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಅಭಿಯಾನದ ಮೂಲಕ ಆರೋಗ್ಯ ಸೇವೆಗಳನ್ನು ಮನೆ ಮನೆಗೆ ತಲುಪಿಸುತ್ತಿವೆ. ಆದರೆ ತಾಲೂಕು ಕೇಂದ್ರ ಅಣ್ಣಿಗೇರಿಯಲ್ಲಿ ದಶಕಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರವೇ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಬೇಕು ಎಂದು ಜನರ ಒತ್ತಡ ಹೆಚ್ಚಾಗಿದೆ.ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಡಾ. ಅಶೋಕ ಅಗರವಾಲ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರೋಗಿಗಳು ಶ್ಲಾಘಿಸಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಣ್ಣಿಗೇರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಗಾಯಾಳುಗಳ ಆರೈಕೆಗೆ ಹಾಗೂ ಮರಣೋತ್ತರ ಪರೀಕ್ಷೆಗೆ ಇನ್ನೂ ಎರಡ್ಮೂರು ವೈದ್ಯರು ಬೇಕು ಎಂದು ಆರೋಗ್ಯ ಇಲಾಖೆಗೆ ಜನತೆ ಒತ್ತಾಯಿಸಿದ್ದಾರೆ.
ಪುರಸಭೆ ಆಡಳಿತವಿರುವ ಅಣ್ಣಿಗೇರಿಯಲ್ಲಿ 30,850 ಜನಸಂಖ್ಯೆ ಇದೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಿತ್ತೂರು, ಅಡ್ನೂರ, ಹಳ್ಳಿಕೇರಿ, ಸಾಸ್ವಿಹಳ್ಳಿ, ಕೊಂಡಿಕೊಪ್ಪ, ಸೈದಾಪುರ, ಮಜ್ಜಿಗುಡ್ಡ, ನಲವಡಿ, ಬಸಾಪುರ, ಭದ್ರಾಪುರಗಳು ಬರುತ್ತಿದ್ದು, ಪ್ರತಿ ಹಳ್ಳಿಯೂ 8ರಿಂದ 10 ಕಿಮೀ ದೂರದಲ್ಲಿವೆ. ಈ ಹಳ್ಳಿಗಳ ವ್ಯಾಪ್ತಿಯೂ ಸೇರಿ 56 ಸಾವಿರ ಜನರಿಗೆ ಇಲ್ಲಿಯ ವೈದ್ಯರು ವೈದ್ಯಕೀಯ ಸೌಕರ್ಯ ಒದಗಿಸಬೇಕಾಗಿದೆ.ಇಲ್ಲಿಯ ನವಲಗುಂದ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ 5 ಎಕರೆ ವ್ಯಾಪ್ತಿಯಲ್ಲಿದೆ. ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ನೂರು ಹಾಸಿಗೆಯ ಆಸ್ಪತ್ರೆ ಇದಾಗಲಿದ್ದು, ಹೆಚ್ಚಿನ ವೈದ್ಯಕೀಯ ಸೌಕರ್ಯ ಸಿಗಲಿದ್ದು, ಸುತ್ತಲಿನ ಹತ್ತು ಹಳ್ಳಿ ಜನರಿಗೆ ಇದರಿಂದ ಅನುಕೂಲವಾಗಲಿದೆ.
ಗದಗ ತಾಲೂಕಲ್ಲಿ 6 ಕಿಮೀಗೊಂದು ಪಿಎಚ್ಸಿಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ, ಹರ್ತಿ, ಮುಳಗುಂದ, ಚಿಂಚಲಿ ಹೀಗೆ 6-7 ಕಿಮೀ ಅಂತರದಲ್ಲಿರುವ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಜತೆಗೆ ಈ ಎಲ್ಲಾ ಊರುಗಳಿಗೂ 15ರಿಂದ 20 ಕಿಮೀ ದೂರದಲ್ಲಿ ಜಿಲ್ಲಾಸ್ಪತ್ರೆ ಇದೆ. ಹೀಗಾಗಿ ಅಲ್ಲಿ ವೈದ್ಯಕೀಯ ಸೌಕರ್ಯಗಳ ಉತ್ತಮವಾಗಿವೆ ಎಂದು ಶ್ಲಾಘಿಸಿದ್ದಾರೆ ಅಣ್ಣಿಗೇರಿ ಜನತೆ.
ಭೌಗೋಳಿಕವಾಗಿ ನಲವಡಿ, ಹಳ್ಳಿಕೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವಶ್ಯಕತೆ ಇದ್ದು, ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿದೆ.ಸಿಬ್ಬಂದಿ ಕೊರತೆ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯೂ ಹೆಚ್ಚಾಗಿದ್ದು, ಮುಖ್ಯವಾಗಿ ಆಡಳಿತ ವೈದ್ಯಾಧಿಕಾರಿ ಇಲ್ಲ. ಆ್ಯಂಬ್ಯುಲೆನ್ಸ್ ಸೇವೆ ಇದ್ದು, ಒಬ್ಬ ಚಾಲಕ ಇದ್ದಾನೆ. ಆದರೆ ಆಸ್ಪತ್ರೆಯಲ್ಲಿ 24 ಗಂಟೆಯೂ ಹೆರಿಗೆ ಸೌಕರ್ಯವಿದ್ದು, ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರನ್ನು ಕರೆದುಕೊಂಡು ಬರಲು ಇನ್ನೊಬ್ಬ ಚಾಲಕನ ಅವಶ್ಯಕತೆ ಇದೆ. ಸದ್ಯ ಹಗಲು ಹೊತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕನೇ ಈ ಕೆಲಸ ನಿರ್ವಹಿಸುತ್ತಿದ್ದಾನೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 7 ಉಪಕೇಂದ್ರಗಳಿದ್ದು, 4ರಲ್ಲಿ ಮಾತ್ರ ಪ್ರೈಮರಿ ಹೆಲ್ತ್‌ಕೇರ್ ಆಫೀಸರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಮೂರು ಹುದ್ದೆ ಖಾಲಿ ಇದ್ದು, ಇವರೇ ರೊಟೇಶನ್ ಮೇಲೆ ಉಪಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ಆರೋಗ್ಯ ಮೇಲ್ವಿಚಾರಕಿ ಹುದ್ದೆ ಇಲ್ಲಿ ಖಾಲಿ ಇದೆ. ಹೀಗಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆ.2008ರಲ್ಲಿಯೇ ರಾಜ್ಯದಲ್ಲಿ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಆದರೆ ಅಣ್ಣಿಗೇರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಿಲ್ಲ.
ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಜಿಲ್ಲಾಧಿಕಾರಿ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಅವರ ಜತೆ ಮಾತುಕತೆ ನಡೆಸಿದ್ದೇವೆ. ಫೆ. 24ರಂದು ನವಲಗುಂದಲ್ಲಿ ಸಿಎಂ ಸಿದ್ದರಾಮಯ್ಯನವರ ಕಾರ್ಯಕ್ರಮವಿದ್ದು, ಅದು ಮುಗಿದ ಮೇಲೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ ಎಂದು ಪಕ್ಷಾತೀತ ರೈತ ಹೋರಾಟ ಸಮಿತಿಯ ಅಣ್ಣಿಗೇರಿ ಕಾರ್ಯಾಧ್ಯಕ್ಷ ಭಗವಂತಪ್ಪ ರಾಮಪ್ಪ ಪುಟ್ಟಣ್ಣವರ ತಿಳಿಸಿದ್ದಾರೆ.ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸದ ಒತ್ತಡ ಹೆಚ್ಚಿದೆ. ಇಲ್ಲಿ ಕನಿಷ್ಠ ಇನ್ನೂ ಎರಡ್ಮೂರು ವೈದ್ಯರು ಬೇಕು, ಅಪಘಾತ ಇಲ್ಲವೇ ಹೆರಿಗೆ ಮಾಡಿಸಲು ಹಾಗೂ ಅಪಘಾತದಲ್ಲಿ ಗಾಯಾಳು ಹಾಗೂ ಮರಣೋತ್ತರ ಪರೀಕ್ಷೆ ಮಾಡಲು ಒಬ್ಬರಿಂದಲೇ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ ಅಗರವಾಲ್.