ಕನ್ನಡಪ್ರಭ ವಾರ್ತೆ ಮಳವಳ್ಳಿ
ನಗರೋತ್ಥಾನ ಯೋಜನೆಯಡಿ ಸಮರ್ಪಕ ಕಾಮಗಾರಿ ಮಾಡದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಪುರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ವಾರ್ಡ್ ಗಳಲ್ಲಿ ನಡೆದಿರುವ ಕಾಮಗಾರಿಗಳ ವಿವರಗಳನ್ನು ಕೂಡಲೇ ನೀಡಬೇಕೆಂದು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದಲ್ಲಿ ಯಾವ ವಾರ್ಡ್ ಗಳಲ್ಲಿ ಏನೇನು ಕೆಲಸ ಮಾಡಬೇಕಿದೆ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸುವ ವಿಚಾರವಾಗಿ ಇಂದ್ರಮ್ಮ, ಅತೀಯಾ ಬೇಗಂ ಸೇರಿದಂತೆ ಇತರೆ ಸದಸ್ಯರು ಮಾತನಾಡಿದರು.
ನಗರೋತ್ಥಾನ ಯೋಜನೆಯಡಿ ಸಮಗ್ರವಾಗಿ ಕಾಮಗಾರಿ ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ವಾರ್ಡ್ ಗಳಲ್ಲಿ ಯಾವುದೇ ಸರಿಯಾದ ಕಾಮಗಾರಿ ನಡೆದಿಲ್ಲ. ಮಾಹಿತಿ ನೀಡುವವರೆಗೂ ಇಂದಿರುವ ಅಭಿವೃದ್ಧಿ ಕಾಮಗಾರಿಗಳ ವಿಷಯವನ್ನು ಮುಂದಿನ ಸಭೆಗೆ ಮುಂದೂಡಬೇಕು ಎಂದು ಆಗ್ರಹಿಸಿದರು.ಸದಸ್ಯ ಸಿದ್ದರಾಜು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿ ಪಾರ್ಕ್ ನಿರ್ಮಿಸಬೇಕು. 1195ರಲ್ಲಿ ಪುರಸಭೆಗೆ ಸೇರಿರುವ ಮಾರೇಹಳ್ಳಿ, ಉಗ್ರಾಪುರದದೊಡ್ಡಿ, ಮಂಚನಹಳ್ಳಿ ಬಳಿ ಒಳಚರಂಡಿ ನಿರ್ಮಾಣ ಮಾಡಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಎಂ.ಎನ್.ಶಿವಸ್ವಾಮಿ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಮಾತನಾಡಿ, ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರು. ನಿಗದಿಯಾಗಿದೆ ಎಂದರು.ಸದಸ್ಯ ಟಿ. ನಂದಕುಮಾರ್ ಮಾತನಾಡಿ, ಜನವರಿಯಿಂದ ಆಗಸ್ಟ್ ವರೆಗೆ ಜನನ ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯು ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆ ವ್ಯಾಪಕವಾಗಿದೆ. ಪುರಸಭೆ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯರಾದ ಕುಮಾರ್, ಎಂ.ಎನ್. ಶಿವಸ್ವಾಮಿ ಮತ್ತು ಎಂ.ಟಿ. ಪ್ರಶಾಂತ್ ಮಾತನಾಡಿ, ಫ್ಲೆಕ್ಸ್ ಅಳವಡಿಕೆಯಲ್ಲಿ ಸಾಕಷ್ಟು ತಾರತಮ್ಯವಾಗಿದೆ. ಇಂತಹ ತಪ್ಪುಗಳನ್ನು ಸರಿಪಡಿಸುವ ದೃಷ್ಟಿಯಿಂದ ಮೂರು ದಿನಗಳ ಅವಧಿ ನಿಗದಿ ಹಾಗೂ ಆದಾಯ ದೃಷ್ಟಿಯಿಂದ ಶುಲ್ಕ ವಿಧಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ:
ಇದೇ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 1ನೇ ವಾರ್ಡ್ ನ ಬಿಜೆಪಿ ಸದಸ್ಯ ಎಂ.ಎನ್. ಕೃಷ್ಣ ಅವಿರೋಧವಾಗಿ ಆಯ್ಕೆಯಾದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಯ್ಕೆಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ. ಸದಸ್ಯರ ಸಹಕಾರದೊಂದಿಗೆ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಮುಖ್ಯಾಧಿಕಾರಿ ನಾಗರತ್ನ, ಉಪಾಧ್ಯಕ್ಷ ಬಸವರಾಜು ಇದ್ದರು.