ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾ:ಕೃಷಿಗೆ ಅವಶ್ಯವಾಗಿರುವ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದ್ದು ತಾಲೂಕಿನ ರೈತರು ಗೊಬ್ಬರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ತಲೆದೋರಿದೆ.
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಸಜ್ಜೆ, ಮೆಕ್ಕೆಜೋಳ, ತೊಗರಿ, ನವಣೆ ಬಿತ್ತನೆಗೊಂಡಿದೆ. ಈಗ ೩೦ರಿಂದ ೪೫ ದಿನಗಳ ಬೆಳೆ ಇದೆ. ಮಳೆಯಿಲ್ಲದೆ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿವೆ. ಒಂದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಬೆಳೆಗಳು ಸುಧಾರಣೆ ಕಾಣಲು ಉಪಯೋಗಿಸಲು ಸದ್ಯ ರೈತರಿಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಇದೆ. ಗೊಬ್ಬರಕ್ಕಾಗಿ ರೈತರು ಸಹಕಾರ ಸಂಘಗಳು, ರಸಗೊಬ್ಬರ ಅಂಗಡಿಗಳಿಗೆ ಅಲೆದಾಡಿದರೂ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.೪೫೦೦ ಮೆಟ್ರಿಕ್ ಟನ್ ಬೇಡಿಕೆ:
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಏಪ್ರಿಲ್‌ನಿಂದ ಜುಲೈ ತಿಂಗಳ ವರೆಗೆ ಒಟ್ಟು ೪೫೦೦ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ ಈಗಾಗಲೇ ೨೫೦೦ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಿದೆ. ಇನ್ನೂ ೨೦೦೦ ಮೆಟ್ರಿಕ್ ಟನ್ ಯೂರಿಯಾ ಅವಶ್ಯಕತೆ ಇದೆ.ಹಿರೇವಂಕಲಕುಂಟಾ:
ತಾಲೂಕಿನ ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯಲ್ಲಿ ಅತಿಯಾಗಿ ಗೊಬ್ಬರದ ಅಭಾವ ಕಾಡುತ್ತಿದೆ. ಈ ಭಾಗದ ಜನ ಗೊಬ್ಬರಕ್ಕಾಗಿ ಕುಷ್ಟಗಿ, ತಾವರಗೇರಾ, ಕನಕಗಿರಿ ತಾಲೂಕು ಅವಲಂಬಿಸಿದ್ದಾರೆ. ಮಾರುಕಟ್ಟೆಯಲ್ಲಿ ಯೂರಿಯಾ ಇದೆಯೋ ಅಥವಾ ಕೃತಕ ಅಭಾವ ಸೃಷ್ಟಿಯ ಕಾರಣವೊ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಯಾವುದೆ ಕ್ರಮಕೈಗೊಳ್ಳದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಕೇಳಿದರೆ, ದಾಸ್ತಾನು ಇಲ್ಲ ಎಂದು ಹೇಳುತ್ತಿದ್ದಾರೆ. ಯೂರಿಯಾ ಗೊಬ್ಬರದೊಂದಿಗೆ ಬೇರೆ ಗೊಬ್ಬರ (ಜಿಂಕ್, ಸ್ಯಾಟ್ರೆಟ್) ಕೀಟನಾಶಕ ಖರೀದಿಸಿದರೆ ಮಾತ್ರ ಯೂರಿಯಾ ಗೊಬ್ಬರ ಕೊಡುವ ಭರವಸೆ ನೀಡುತ್ತಾರೆ. ಇಲ್ಲವಾದರೆ ಯೂರಿಯಾ ಸಿಗುವುದು ದುಸ್ತರವಾಗಿದೆ. ಯೂರಿಯಾ ಬೇಡಿಕೆಗಿಂತ ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲ ವ್ಯಾಪಾರಿಗಳ ಬಳಿ ಇರುವ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಕೊಳ್ಳಬೇಕಾದ ಅನಿವಾರ್ಯತೆ ಇದ ಎಂದು ರೈತರು ಆರೋಪಿಸಿದ್ದಾರೆ.ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಯೂರಿಯಾ ಗೊಬ್ಬರದ ಉತ್ಪಾದನೆ ಕಡಿಮೆಯಾಗಿದೆ. ಹಿರೇವಂಕಲಕುಂಟಾ ಭಾಗದಲ್ಲಿ ಕೊರತೆಯಾಗಿದೆ. ಈಗಾಗಲೇ ಸಂಬಂಧಿಸಿದ ಕಂಪನಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ರಸಗೊಬ್ಬರ ಪೂರೈಕೆಯಲ್ಲಿ ಕೊಪ್ಪಳ ಜಿಲ್ಲೆಗೆ ಹೋಲಿಸಿದರೆ ಯಲಬುರ್ಗಾ ಉತ್ತಮವಾಗಿದೆ. ಯಾವುದೇ ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ರೈತರು ಯಾವುದೇ ಆತಂಕ ಪಡಬೇಕಿಲ್ಲ.
ಪ್ರಮೋದ ತುಂಬಳ, ಸಹಾಯಕ ಕೃಷಿ ನಿರ್ದೇಶಕ ಯಲಬುರ್ಗಾ