ಕತ್ತೆಬೆನ್ನೂರಿನಲ್ಲಿ ಕಾರ್ಮಿಕರಿಗೆ ಕೂಲಿ ಕೊಟ್ಟು ಯೂರಿಯಾ ಖರೀದಿಸಿದ ರೈತರು
ಕನ್ನಡಪ್ರಭ ವಾರ್ತೆ ಹೂವಿನಹಡಗಲಿತಾಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದು, ಉತ್ತಮ ಮುಂಗಾರು ಮಳೆಯಾಗಿರುವ ಹಿನ್ನೆಲೆ ಯೂರಿಯಾ ರಸಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ನಾಗರಪಂಚಮಿ ಹಬ್ಬ ಆಚರಣೆ ಬಿಟ್ಟು ಬೆಳಗಿನ ಜಾವದಲ್ಲೇ, ಯೂರಿಯಾ ರಸಗೊಬ್ಬರಕ್ಕಾಗಿ ಮಹಿಳೆಯರು ಮಕ್ಕಳು ಸರದಿ ಸಾಲಿನಲ್ಲಿ ನಿಂತಿರುವ ಘಟನೆ ಜರುಗಿದೆ.
ತಾಲೂಕಿನ ಕತ್ತೆಬೆನ್ನೂರು ಸಹಕಾರಿ ಸಂಘದ ಸೊಸೈಟಿ ವ್ಯಾಪ್ತಿಯಲ್ಲಿನ ಕತ್ತೆಬೆನ್ನೂರು, ಮಕರಬ್ಬಿ, ಬ್ಯಾಲಹುಣ್ಸಿ, ನಂದಿಗಾವಿ, ಹಿರೇ ಬನ್ನಿಮಟ್ಟಿ, ಚಿಕ್ಕ ಬನ್ನಿಮಟ್ಟಿ ಗ್ರಾಮಗಳ ನೂರಾರು ರೈತರು, ಮಹಿಳೆಯರು ಮತ್ತು ಮಕ್ಕಳು ಬೆಳಗಿನ ಜಾವದಲ್ಲೇ, ಊರಿನಿಂದ ಬಂದು ಯೂರಿಯಾ ರಸ ಗೊಬ್ಬರಕ್ಕಾಗಿ ಸರದಿ ಸಾಲು ನಿಂತಿದ್ದರು. ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆ ಮೆಕ್ಕೆಜೋಳಕ್ಕೆ ಯೂರಿಯಾ ರಸ ಗೊಬ್ಬರದ ಬೇಡಿಕೆ ಸಹಜವಾಗಿಯೇ ಹೆಚ್ಚಾಗಿದೆ. ಈ ರಸಗೊಬ್ಬರ ಬಳಕೆ ಮಾಡದಿದ್ದರೇ ಇಳುವರಿ ಸೇರಿದಂತೆ ಬೆಳೆ ಕುಂಠಿತವಾಗುತ್ತದೆ ಎಂದು ರೈತರು ಯೂರಿಯಾ ರಸ ಗೊಬ್ಬರಕ್ಕೆ ಪರದಾಡುತ್ತಿದ್ದಾರೆ.ಕತ್ತೆಬೆನ್ನೂರು ಸೊಸೈಟಿಗೆ ಕೇವಲ 800 ಚೀಲ ಯೂರಿಯಾ ರಸ ಗೊಬ್ಬರ ಪೂರೈಕೆಯಾಗಿದೆ. ಆದರೆ ಸರದಿ ಸಾಲಿನಲ್ಲಿ 700ಕ್ಕೂ ಹೆಚ್ಚು ರೈತರು, ಮಹಿಳೆಯರು ಮತ್ತು ಮಕ್ಕಳು ಯೂರಿಯಾ ರಸ ಗೊಬ್ಬರಕ್ಕಾಗಿ ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದುಕೊಂಡು ನಿಂತಿದ್ದರು. ಬೇಡಿಕೆಗೆ ತಕ್ಕಂತೆ ಯೂರಿಯಾ ರಸಗೊಬ್ಬರ ಪೂರೈಕೆ ಇಲ್ಲದ ಕಾರಣ ಒಬ್ಬರಿಗೆ ಒಂದು ಚೀಲ ಗೊಬ್ಬರ ಮಾತ್ರ ವಿತರಿಸಿದರು.
ಇದನ್ನು ಮನಗಂಡ ದೊಡ್ಡ ಹಿಡುವಳಿ ರೈತರು 20 ಎಕರೆಗೂ ಹೆಚ್ಚು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಒಂದು ಚೀಲ ಯೂರಿಯಾ ರಸಗೊಬ್ಬರ ಜಮೀನಿನ 4 ಸಾಲುಗಳಿಗೆ ಸಾಲುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಒಂದು ದಿನದ ಕೂಲಿ ಕೊಟ್ಟು, ಸರದಿ ಸಾಲಿನಲ್ಲಿ ನಿಲ್ಲಿಸಿ ಗೊಬ್ಬರ ಖರೀದಿ ಮಾಡುವ ಪರಿಸ್ಥಿತಿ ಎದುರಾಯಿತು.ಕತ್ತೆಬೆನ್ನೂರು ಸೊಸೈಟಿ ವ್ಯಾಪ್ತಿಯಲ್ಲಿ ಸಾವಿರ ಎಕರೆಯಷ್ಟು ಮೆಕ್ಕೆಜೋಳ ಬಿತ್ತನೆಯಾಗಿದೆ. ಈವರೆಗೂ ಸೊಸೈಟಿಗೆ 800 ಚೀಲ ಯೂರಿಯಾ ರಸ ಗೊಬ್ಬರ ಬಂದಿದೆ. ಇನ್ನು 1500 ಚೀಲ ಯೂರಿಯಾ ರಸ ಗೊಬ್ಬರದ ಬೇಡಿಕೆ ಇದೆ. ಈ ಕುರಿತು ಸೊಸೈಟಿ ಅಧಿಕಾರಿಗಳು ಕೃಷಿ ಸಹಾಯಕ ನಿರ್ದೇಶಕರ ಜತೆಗೆ ಚರ್ಚಿಸಿದ್ದಾರೆ. ಆದಷ್ಟು ಬೇಗನೆ ಯೂರಿಯಾ ರಸಗೊಬ್ಬರ ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ. ಕೃಷಿ ಉಪಕರಣ ಮಾರಾಟ ಅಂಗಡಿಗಳಿಗೆ ಯೂರಿಯಾ ರಸ ಗೊಬ್ಬರ ಪೂರೈಕೆ ಮಾಡುವುದಿಲ್ಲ, ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಾರೆಂಬ ಕಾರಣಕ್ಕಾಗಿ, ಸದ್ಯ ಪೂರೈಕೆಯಾಗುವ ಎಲ್ಲ ಯೂರಿಯಾ ರಸ ಗೊಬ್ಬರವನ್ನು, ನೇರವಾಗಿ ಸೊಸೈಟಿಗಳಿಗೆ ಕಳಿಸುತ್ತೇವೆ ಅಂತಾ ಹೇಳಿದ್ದಾರೆ ಎಂದು ರೈತ ಬೆಟ್ಟದ ಮಲ್ಲಪ್ಪ ಹೇಳಿದರು.