ಕನ್ನಡಪ್ರಭ ವಾರ್ತೆ ಸುರಪುರ
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಕುಸಿತಗೊಂಡಿದ್ದು, ಯಾದಗಿರಿ ಜಿಲ್ಲೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಶುಕ್ರವಾರ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ತಾಲೂಕು ಸಮಿತಿ ಸದಸ್ಯರು ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಕ್ಕೆ ಬಂದಿದ್ದು, ಶಿಕ್ಷಣ ಗುಣಮಟ್ಟ ಕುಸಿದಿದೆ. ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆಯಿದೆ. ಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರ ಮೇಲೆ ಶಾಲೆ ನಡೆಯುತ್ತಿವೆ. ಈ ರೀತಿಯ ಹಲವಾರು ಸಮಸ್ಯೆಗಳಿಂದ ವಿದ್ಯಾರ್ಥಿಗಳ ಕಲಿಕಾಮಟ್ಟ ಕುಸಿದಿದೆ ಎಂದು ಆರೋಪಿಸಿದರು.
ಗುಣಮಟ್ಟದ ಶಿಕ್ಷಣ ಸಿಗದೆ ಮುಂಬರುವ ದಿನಗಳಲ್ಲಿ ಶಿಕ್ಷಣದಿಂದ ವಂಚಿತಗೊಳ್ಳುವ ಆತಂಕ ಎದುರಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿಷಯವಾರು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಶಿಕ್ಷಣ ಗುಣಮಟ್ಟ ಬೆಳೆಸಬೇಕು ಎಂದು ಒತ್ತಾಯಿಸಿದರು.ಕೆಲ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರಿಲ್ಲದೆ ವರ್ಷವಿಡೀ ಕಲಿಕೆ ನಡೆಯುವದು ಸಾಮಾನ್ಯವಾಗಿದೆ. ಹೀಗಾದರೆ ವಿಷಯವಾರು ಶಿಕ್ಷಕರಿಲ್ಲದೆ ಮಕ್ಕಳ ಕಲಿಯುವುದಾದರು ಹೇಗೆಂದು ಪ್ರಶ್ನಿಸಿದ ಅವರು, ಮಕ್ಕಳ ಅಭಿವೃದ್ಧಿಗಾಗಿ ಸರಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾದರೂ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೊರ ಜಿಲ್ಲೆಯವರು ಕೇವಲ ಸರ್ಕಾರಿ ನೌಕರಿ ನೇಮಕಾತಿ ಹೊಂದಲು ಈ ಭಾಗಕ್ಕೆ ಆಯ್ಕೆ ಬಯಿಸಿ ಆಯ್ಕೆಯಾಗುತ್ತಾರೆ. ನೇಮಕಾತಿ ಹೊಂದಿದ ನಂತರ ಅವರ ನಿವೃತ್ತಿವರೆಗೆ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿಯೇ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವಂತೆ ಸರ್ಕಾರ ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.ಶಿಕ್ಷಣದ ಅವ್ಯವಸ್ಥೆ ನೋಡಿದರೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಬೇಜವಾಬ್ದಾರಿತನ ಎತ್ತಿ ತೋರಿಸುತ್ತಿದೆ. ರಾಜ್ಯದಲ್ಲಿಯೇ ಅನೇಕ ವರ್ಷಗಳಿಂದ ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶವೆಂದು ತಿಳಿದು 371(ಜೆ) ತಿದ್ದುಪಡಿ ತಂದು ಶಿಕ್ಷಣಕ್ಕೆ ಒತ್ತು ಕೊಟ್ಟರೂ ಅಭಿವೃದ್ಧಿಯಾಗುತ್ತಿಲ್ಲ. ಖಾಲಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದಿದ್ದರೆ ನಿರಂತರ ಹೋರಾಟ ಜಿಲ್ಲಾದ್ಯಂತ ಹಮ್ಮಿಕೊಂಡು ಬೆಂಗಳೂರು ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಗ್ರೇಡ್-2 ತಹಸೀಲ್ದಾರ್ ಮಲ್ಲು ದಂಡು ಅವರಿಗೆ ಮನವಿ ಸಲ್ಲಿಸಿದರು.
ಸಂಚಾಲಕರಾದ ಬಸವರಾಜ ದೊಡ್ಡಮನಿ ಶೆಳ್ಳಗಿ, ಖಾಜಾ ಹುಸೇನ್ ಗುಡಗುಂಟಿ, ಹೊನ್ನಪ್ಪ ದೇವಿಕೇರಿ, ಪಾಲರಡ್ಡಿ ಆಂದ್ರ, ರಮೇಶ ಹುಂಡೆಕಲ್, ಹುಲಗಪ್ಪ ಬೈಲಿಕುಂಟಿ, ಮರೆಪ್ಪ ಪಿ.ಕಾಂಗ್ರೆಸ್, ಮರಿಲಿಂಗಪ್ಪ ನಾಟೇಕರ, ಪರಶುರಾಮ ಬೈಲಿಕುಂಟಿ, ಮುತ್ತುರಾಜ ಹುಲಿಕೇರಿ, ಸಂಗಪ್ಪ ಚಿಂಚೋಳಿ, ರಾಮಣ್ಣ ಬಬಲಾದ, ಮಲ್ಲಿಕಾರ್ಜುನ ಬಡಿಗೇರ, ದ್ಯಾವಪ್ಪ ಬಡಿಗೇರ, ಮಲ್ಲಪ್ಪ ಉರುಸುಲ್, ನಿಂಗಪ್ಪ ಹಂಪಿನ್, ಚಂದಪ್ಪ ತಳಕ, ಭೀಮಣ್ಣ ಕ್ಯಾತನಾಳ, ಶರಣಪ್ಪ ನಗನೂರು ಸೇರಿದಂತೆ ಇತರರಿದ್ದರು.