ಮುಂಡರಗಿ: ಬಸವಕಲ್ಯಾಣದ ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ದುಷ್ಕರ್ಮಿಗಳು ಬೇರೆ ಯಾವುದೋ ಮೂರ್ತಿಯನ್ನು ಕೂರಿಸಿ ಹಡಪದ ಅಪ್ಪಣ್ಣ ಶರಣರಿಗೆ ಅವಮಾನ ಮಾಡಿದ್ದು, ಕೂಡಲೇ ಆ ಗವಿಯಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಕೂರಿಸಬೇಕೆಂದು ಆಗ್ರಹಿಸಿ ತಾಲೂಕು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಮಂಗಳವಾರ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸುವಂತೆ ಹಡಪದ ಅಪ್ಪಣ್ಣ ಭಾರತಿ ಸ್ವಾಮಿಜಿ, ತಾವು ಹಾಗೂ ಬಸವಕಲ್ಯಾಣದ ಸಮಾಜದವರು ಸೇರಿ ಅನೇಕ ಬಾರಿ ಅಲ್ಲಿನ ತಹಸೀಲ್ದಾರ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳಿಗೆ, ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಈ ಕುರಿತು ಭಾಲ್ಕಿ ಸ್ವಾಮೀಜಿಯೊಬ್ಬರನ್ನು ಹೊರತುಪಡಿಸಿ ನಾಡಿನ ಯಾವುದೇ ಬಸವತತ್ವದ ಸ್ವಾಮಿಗಳಾಗಲಿ, ಬಸವದಳ, ಬಸವ ಭಕ್ತರಾಗಲಿ ಚಕಾರವೆತ್ತದಿರುವುದು ಹಡಪದ ಸಮಾಜದವರಿಗೆ ನೋವುಂಟು ಮಾಡಿದೆ. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ಮುಂದುವರಿದಲ್ಲಿ ಅಪ್ಪಣ್ಣಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ವೀರಣ್ಣ ಹಡಪದ ಮಾತನಾಡಿದರು. ಪಟ್ಟಣದ ಅನ್ನದಾನೀಶ್ವರ ಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ರಸ್ತೆ ಮೂಲಕ ಬೃಂದಾವನ ವೃತ್ತಕ್ಕೆ ತೆರಳಿ ಅಲ್ಲಿಂದ ಕೊಪ್ಪಳ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಗ್ರೇಡ್ 2 ತಹಸೀಲ್ದಾರ್ ಕೆ. ರಾಧಾ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಹಡಪದ ಸಮಾಜದ ರವಿ ಹಡಪದ, ಚಂದ್ರಶೇಖರ ಹಡಪದ, ನಾಗರಾಜ ಹಡಪದ, ಬಸವರಾಜ ಹಡಪದ, ದೇವರಾಜ ಹಡಪದ, ಸುರೇಶ ಹಡಪದ, ಮಂಜುನಾಥ ಹಡಪದ, ಶರಣಪ್ಪ ಹಡಪದ, ಗಂಗಾಧರ ಹಡಪದ, ರೇವಣಸಿದ್ದಪ್ಪ ಹಡಪದ, ಶಂಕ್ರಪ್ಪ ಹಡಪದ, ಮುತ್ತು ಹಡಪದ, ಮಹಾಂತೇಶ ಹಡಪದ, ವೀರೇಶ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.