ಮುತ್ತೋಡಿ - ಹೆಬ್ಬೆ ರಸ್ತೆ ಪುನರ್‌ ನಿರ್ಮಾಣ ಕಾಮಗಾರಿ ಕೈಬಿಡಲು ಆಗ್ರಹ

KannadaprabhaNewsNetwork |  
Published : Aug 31, 2024, 01:38 AM IST

ಸಾರಾಂಶ

ಚಿಕ್ಕಮಗಳೂರು, ಭದ್ರಾ ಅಭಯಾರಣ್ಯದೊಳಗಿನ ಮುತ್ತೋಡಿ - ಹೆಬ್ಬೆ ಮಾರ್ಗವಾಗಿ ನರಸಿಂಹರಾಜಪುರ ಸಂಪರ್ಕಿಸುವ ರಸ್ತೆ ಪುನರ್ ನಿರ್ಮಾಣ ಕಾಮಗಾರಿಯನ್ನು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕೈಗೆತ್ತಿಕೊಳ್ಳಬಾರದು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕೈಗೆತ್ತಿಕೊಳ್ಳಬಾರದು: ಪರಿಸರವಾದಿಗಳ ಆಗ್ರಹ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭದ್ರಾ ಅಭಯಾರಣ್ಯದೊಳಗಿನ ಮುತ್ತೋಡಿ - ಹೆಬ್ಬೆ ಮಾರ್ಗವಾಗಿ ನರಸಿಂಹರಾಜಪುರ ಸಂಪರ್ಕಿಸುವ ರಸ್ತೆ ಪುನರ್ ನಿರ್ಮಾಣ ಕಾಮಗಾರಿಯನ್ನು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕೈಗೆತ್ತಿಕೊಳ್ಳಬಾರದು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು - ನರಸಿಂಹರಾಜಪುರ ರಸ್ತೆ ಈ ಹಿಂದೆ ಭದ್ರಾ ಅಣೆಕಟ್ಟೆ ನಿರ್ಮಾಣದ ನಂತರ ಮುಳುಗಡೆಯಾಗಿದೆ. ಇದೀಗ ಆ ರಸ್ತೆಯ ಉಳಿದ ಭಾಗಗಳು ಭದ್ರಾ ಅಭಯಾರಣ್ಯದ ಭಾಗವಾಗಿದ್ದು, ಪೂರ್ಣವಾಗಿ ಅಭಯಾರಣ್ಯದ ಒಳಗೆ ಸಾಗುತ್ತದೆ. ಜೊತೆಗೆ ಈ ರಸ್ತೆ ಸಾಕಷ್ಟು ವನ್ಯಜೀವಿಗಳ ಓಡಾಟದ ಹಾದಿಯೂ ಆಗಿದೆ ಎಂದು ಭದ್ರಾ ವೈಲ್ಡ್‌ ಲೈಫ್‌ ಕನ್ಸರ್ವೇಶನ್‌ ಟ್ರಸ್ಟ್‌ನ ಡಿ.ವಿ. ಗಿರೀಶ್‌, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿನ ಮಾಜಿ ಗೌರವ ವನ್ಯ ಜೀವಿ ಪರಿಪಾಲಕ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭದ್ರಾ ಅಭಯಾರಣ್ಯ ರಾಜ್ಯದ ಜನವಸತಿ ಇಲ್ಲದ ಅತ್ಯಂತ ಸುರಕ್ಷಿತ ಅರಣ್ಯವಾಗಿದೆ. 2000- 2002ರಲ್ಲಿ ಅಭಯಾರಣ್ಯ ದೊಳಗಿದ್ದ 13 ಹಳ್ಳಿಗಳು ಹಾಗೂ ಅವುಗಳಲ್ಲಿ ವಾಸವಾಗಿದ್ದ 700 ಕುಟುಂಬಗಳನ್ನು ಸರ್ಕಾರ ಕೋಟ್ಯಂತರ ರು. ವ್ಯಯಿಸಿ ಸ್ಥಳಾಂತರಗೊಳಿಸಿತು. ಅವರ ಈ ಪುನರ್ವಸತಿ ಯೋಜನೆ ದೇಶದಲ್ಲೇ ಅತ್ಯಂತ ಮೆಚ್ಚುಗೆಗಳಿಸಿದ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಟ್ಟು 500ಚ. ಕಿಮೀ ವಿಸ್ತಾರದ ಈ ಅಭಯಾರಣ್ಯವನ್ನು 1998ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಅಭಯಾರಣ್ಯಕ್ಕೆ 50 ವರ್ಷಗಳು ತುಂಬಿವೆ. ಅರಣ್ಯ ಇಲಾಖೆ ಅತ್ಯಂತ ಎಚ್ಚರದಿಂದ ಈ ಅಭಯಾರಣ್ಯವನ್ನು ಕಾಪಾಡಿಕೊಂಡು ಬಂದಿದ್ದು, ಪ್ರತೀ ವರ್ಷ ಇಲಾಖೆ ಕೋಟ್ಯಂತರ ರು.ಗಳನ್ನು ಅರಣ್ಯ ರಕ್ಷಣೆಗಾಗಿ ವ್ಯಯಿಸುತ್ತಿದೆ. ಸರ್ಕಾರ ಸಹ ಈ ಅಭಯಾರಣ್ಯವನ್ನು ‘ಕ್ರಿಟಿಕಲ್‌ ಟೈಗರ್ ಹ್ಯಾಬಿಟೇಟ್’ (ಅತ್ಯಂತ ಜಟಿಲ ಹುಲಿ ಆವಾಸ ಸ್ಥಾನ) ಎಂದು 2008 ರಲ್ಲೇ ಘೋಷಿಸಿದೆ ಎಂದು ಹೇಳಿದ್ದಾರೆ. ಈ ಅಭಯಾರಣ್ಯದಲ್ಲಿ ಆನೆಗಳ ಸಂಖ್ಯಾ ಬಾಹುಳ್ಯವೂ ಇದ್ದು, ಇದು ಅತ್ಯಂತ ಅಪರೂಪದ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವೂ ಆಗಿದೆ. ಅಭಯಾರಣ್ಯದಲ್ಲಿ ಭದ್ರಾ ನದಿ ನೀರಿನ ಹರಿವನ್ನು ಅಧಿಕಗೊಳಿಸುವ ಉಪ ನದಿಗಳಾದ ತಡಬೇಹಳ್ಳ, ಹೆಬ್ಬೇಹಳ್ಳ ಹಾಗೂ ಸೋಮವಾಹಿನಿ ಹಳ್ಳಗಳು ಹರಿದು ಹೋಗುತ್ತವೆ. ಈ ಅಂಶಗಳನ್ನು ಪರಿಗಣಿಸದೆ ಜನ, ವಾಹನ ಓಡಾಟಕ್ಕೆ ಅವಕಾಶ ನೀಡುವ ಅತ್ಯಂತ ಅಪಾಯಕಾರಿಯಾದ ರಸ್ತೆ ಪುನರ್ ನಿರ್ಮಾಣದ ಕಾಮಗಾರಿ ಪ್ರಸ್ತಾವನೆಯೊಂದನ್ನು ಕೈಗೊಳ್ಳಲು ಮುಂದಾಗಿರುವು ಆತಂಕಕಾರಿಯಾಗಿದೆ. ಅಭಯಾರಣ್ಯಕ್ಕೆ ಮಾರಕವಾಗುವ ಈ ರಸ್ತೆ ಪುನರ್ ನಿರ್ಮಾಣ ಕಾಮಗಾರಿಗೆ ನಮ್ಮ ಪೂರ್ಣ ವಿರೋಧವಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ