ಸಮಪರ್ಕ ನೀರು ಸರಬರಾಜು ಮಾಡಲು ತುರ್ತು ಕ್ರಮ: ಶಾಸಕ ಡಿ.ರವಿಶಂಕರ್

KannadaprabhaNewsNetwork | Published : Mar 2, 2024 1:46 AM

ಸಾರಾಂಶ

ಮುಂದಿನ ದಿನಗಳಲ್ಲಿ ನಾನು ಖುದ್ದಾಗಿ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಾಮರ್ಶೆ ನಡೆಸಲಿದ್ದು, ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಶಾಸಕರಿಂದ ಎಚ್ಚರಿಕೆ ನುಡಿ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕ್ಷೇತ್ರದ ವ್ಯಾಪ್ತಿಗೆ ಸೇರಿದ 16 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದ್ದು, ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದರ ಜತೆಗೆ ಉಳಿದ ಎಲ್ಲೆಡೆಗೂ ಸಮಪರ್ಕವಾಗಿ ನೀರು ಸರಬರಾಜು ಮಾಡಲು ತುರ್ತು ಕ್ರಮ ಕೈಗೊಳ್ಳುವುದಾಗಿ ಶಾಸಕ ಡಿ. ರವಿಶಂಕರ್ ಹೇಳಿದರು.

ಪಟ್ಟಣದ ಆಡಳಿತಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಟಾಸ್ಕ್‌ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಸಮಯ ಕಳೆಯುವವರೆಗೂ ತಾಲೂಕು ಮಟ್ಟದ ಅಧಿಕಾರಿಗಳು ರಜೆ ಹಾಕದೆ ಕೆಲಸ ನಿರ್ವಹಿಸಿ ನನಗೆ ನಿತ್ಯ ವಸ್ತು ಸ್ಥಿತಿಯ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಇದರ ಜತೆಗೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಅಗತ್ಯವಿದ್ದಲ್ಲಿ ಪಂಚಾಯಿತಿ ಕೇಂದ್ರಗಳು ಮತ್ತು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಸರ್ಕಾರದಿಂದ ದೊರೆಯುವ ಸವತ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಬೇಕೆಂದು ಆದೇಶಿಸಿದರು.

ಮುಂದಿನ ದಿನಗಳಲ್ಲಿ ನಾನು ಖುದ್ದಾಗಿ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಾಮರ್ಶೆ ನಡೆಸಲಿದ್ದು, ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಆನಂತರ ಅವರು ಇಲಾಖಾವಾರು ಅಧಿಕಾರಿಗಳಿಂದ ಮಾಹಿತಿ ಪಡೆದು ಬರ ನಿರ್ವಹಣೆ ಸಂಬಂಧ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಕೆ.ಆರ್. ನಗರ ತಹಸೀಲ್ದಾರ್ ಸಿ.ಎಸ್. ಪೂರ್ಣಿಮ, ಸಾಲಿಗ್ರಾಮ ತಹಸೀಲ್ದಾರ್ ಎಚ್.ಎನ್. ನರಗುಂದ್ ಮಾತನಾಡಿ, ಬರನಿರ್ವಹಣೆಯ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ರೈತ ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಂಪ್ರಸಾದ್, ಬಿಇಒ ಆರ್.ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಗ್ರಾಮೀಣಾಭಿವೃದ್ದಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜಾರಾಂ ವೈಲಾಯ, ಸೆಸ್ಕ್‌ ಎಇಇ ಅರ್ಕೇಶ್ವರ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಜೆ. ನವೀನ್, ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ. ಅಶೋಕ್, ಸಹಾಯಕ ಪಶು ನಿರ್ದೇಶಕ ಡಾ. ಮಂಜುನಾಥ್, ರೈತ ಮುಖಂಡರು ಮತ್ತು ಅಧಿಕಾರಿಗಳು ಇದ್ದರು.

Share this article