ಶ್ರೀಗಂಧದ ಮರಗಳ ಕಳ್ಳತನ ತಡೆಗಟ್ಟಲು ಒತ್ತಾಯ

KannadaprabhaNewsNetwork |  
Published : Jul 15, 2025, 01:00 AM IST
೧೪ಕೆಎಲ್‌ಆರ್-೧ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕ ಶ್ರೀನಿವಾಸರೆಡ್ಡಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಶ್ರೀನಿವಾಸಪುರ, ಕೋಲಾರ ಸೇರಿದಂತೆ ವಿವಿಧೆಡೆ ಹೆಚ್ಚು ಶ್ರೀಗಂಧ ಬೆಳೆಯಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಶ್ರೀಗಂಧದ ಕಳ್ಳತನ ಸಂಬಂಧ ಎಂಟು ಪ್ರಕರಣಗಳು ದಾಖಲಾಗಿವೆ. ದಾಖಲಾಗದ ಹಲವಾರು ಪ್ರಕರಣಗಳೂ ಇವೆ. ಕಳ್ಳತನ ತಡೆಯಲು ಜಮೀನಿನಲ್ಲಿ ಸಿ.ಸಿ.ಟಿ.ವಿ, ತಡೆಗೋಡೆ, ಸೋಲಾರ್ ಫೆನ್ಸ್ ಹಾಕಿದ್ದರೂ ಶ್ರೀಗಂಧ ಕಳ್ಳರ ಅಟಾಟೋಪ ಮುಂದುವರಿದಿದೆ

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಶ್ರೀಗಂಧದ ಕಳ್ಳತನ ಹೆಚ್ಚುತ್ತಿದ್ದು, ಇದರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕೈವಾಡವಿರುವ ಸಂಶಯವಿದೆ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಚಾಲಕ ಶ್ರೀನಿವಾಸರೆಡ್ಡಿ, ‘ಹಲವಾರು ಬಾರಿ ಮನವಿ ನೀಡಿದರೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶ್ರೀಗಂಧ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಳ್ಳರ ಜೊತೆ ಅರಣ್ಯ ಇಲಾಖೆಯೇ ಕೈಜೋಡಿಸಿದಂತಿದೆ ಎಂದು ಸಂಶಯ ವ್ಯಕ್ತಪಡಿಸಿದರು.ಎಂಟು ಪ್ರಕರಣ ದಾಖಲು

ಜಿಲ್ಲೆಯಲ್ಲಿ ಶ್ರೀನಿವಾಸಪುರ, ಕೋಲಾರ ಸೇರಿದಂತೆ ವಿವಿಧೆಡೆ ಹೆಚ್ಚು ಶ್ರೀಗಂಧ ಬೆಳೆಯಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಶ್ರೀಗಂಧದ ಕಳ್ಳತನ ಸಂಬಂಧ ಎಂಟು ಪ್ರಕರಣಗಳು ದಾಖಲಾಗಿವೆ. ದಾಖಲಾಗದ ಹಲವಾರು ಪ್ರಕರಣಗಳೂ ಇವೆ. ಕಳ್ಳತನ ತಡೆಯಲು ಜಮೀನಿನಲ್ಲಿ ಸಿ.ಸಿ.ಟಿ.ವಿ, ತಡೆಗೋಡೆ, ಸೋಲಾರ್ ಫೆನ್ಸ್ ಹಾಕಿದ್ದರೂ ಶ್ರೀಗಂಧ ಕಳ್ಳರ ಅಟಾಟೋಪ ಮುಂದುವರಿದಿದೆ. ಚಿಪ್ ವ್ಯವಸ್ಥೆಯೂ ವಿಫಲವಾಗಿದೆ’ ಎಂದು ಹೇಳಿದರು.

ಶ್ರೀಗಂಧ ಬೆಳೆಯನ್ನು ಅರಣ್ಯ ಇಲಾಖೆಯಿಂದ ತೋಟಗಾರಿಗೆ ಇಲಾಖೆಗೆ ವರ್ಗಾಯಿಸಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ. ಅರಣ್ಯ ಇಲಾಖೆ ಹಲವಾರು ನಿರ್ಬಂಧ ಹೇರಿದೆ. ಶ್ರೀಗಂಧ ಬೆಳೆಯ ಜೊತೆಗೆ ಪೂರಕ ಸಸಿಗಳನ್ನು ಅವೈಜ್ಞಾನಿಕವಾಗಿ ವಿತರಿಸುತ್ತಿದೆ. ತೋಟಗಾರಿಕೆ ಇಲಾಖೆಯಾದರೆ ಹಣ್ಣಿನ ಗಿಡ ಕೊಡುತ್ತಾರೆ. ಹಣ್ಣಿನ ಗಿಡ ನೆಟ್ಟರೆ ಶ್ರೀಗಂಧ ಚೆನ್ನಾಗಿ ಬೆಳೆಯುತ್ತದೆ’ ಎಂದರು. ಪೊಲೀಸರ ನಿರ್ಲಕ್ಷ್ಯ:

ಕಳ್ಳತನ ಹೆಚ್ಚಲು ಪೊಲೀಸರ ನಿರ್ಲಕ್ಷ್ಯ ಹಾಗೂ ಕೈವಾಡವೂ ಇದೆ. ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಂ.ನಾರಾಯಣ ಅವರಿಗೆ ಈ ಸಂಬಂಧ ದೂರು ನೀಡಿದಾಗ ಪೊಲೀಸ್ ಬೀಟ್ ಹಾಕಿದ್ದರು. ಆಗ ಕಳ್ಳತನ ಸ್ವಲ್ಪ ಕಡಿಮೆ ಆಗಿತ್ತು. ಅವರ ವರ್ಗಾವಣೆ ಬಳಿಕ ಮತ್ತೆ ಕಳ್ಳತನ ಹೆಚ್ಚಾಗಿದೆ. ಈ ಸಂಬಂಧ ಈಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರನ್ನೂ ಭೇಟಿಯಾಗಿ ಮನವಿ ಕೊಡುತ್ತೇವೆ ಎಂದು ಹೇಳಿದರು. ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಗೌಡ ಮಾತನಾಡಿ, ‘ಶ್ರೀಗಂಧಕ್ಕೆ ಬೇಡಿಕೆ ಇದೆ. ರಾಜ್ಯದಲ್ಲಿ ೫೦ ಸಾವಿರ ರೈತರು ಬೆಳೆಯುತ್ತಾರೆ. ಆದರೆ, ಕಳ್ಳತನ ಹೆಚ್ಚಿದೆ. ದೊಡ್ಡ ಜಾಲವೇ ಇದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಶ್ರೀಗಂಧ ರೈತರಿಗೆ ಸಂಕಷ್ಟ ಎದುರಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.ಅರಣ್ಯಾಧಿಕಾರಿಗಳಿಂದ ತೊಂದರೆ

ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ರಮೇಶ್ ಮಾತನಾಡಿ, ಸಚಿವ ಈಶ್ವರ ಖಂಡ್ರೆ ಶ್ರೀಗಂಧ ಬೆಳೆದು ಶ್ರೀಮಂತರಾಗಿ ಎಂದು ಪ್ರೋತ್ಸಾಹಿಸುತ್ತಾರೆ, ಆದರೆ, ಅರಣ್ಯ ಅಧಿಕಾರಿಗಳಿಂದ ತೊಂದರೆ ಆಗುತ್ತಿದೆ ಎಂದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ