ಶಿವಮೊಗ್ಗ: ಯಾವುದೇ ಪಠ್ಯಗಳನ್ನು ರಚಿಸುವುದು, ಅದಕ್ಕೆ ಕಾಲನಿಗದಿ ಮಾಡುವುದು ಮುಖ್ಯವಾದರೂ ಆ ಪಠ್ಯಕ್ರಮವನ್ನು ಉಪನ್ಯಾಸಕರು ಹೇಗೆ ಬೋಧಿಸಬೇಕು, ಎಂಬುದನ್ನು ನಾವು ಉಪನ್ಯಾಸಕರಿಗೇ ಕಾರ್ಯಾಗಾರ ಮಾಡುವ ತುರ್ತು ಇದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.
ರಾಜ್ಯಶಾಸ್ತ್ರ ಎಂಬುದು ಒಂದು ವಿಶೇಷವಾದ ಅಧ್ಯಯನ. ಇದು ವಿಜ್ಞಾನವೂ ಹೌದು. ಪೊಲಿಟಿಕಲ್ ಸೈನ್ಸ್ ಎಂದೇ ಇದನ್ನು ಬಿಂಬಿಸಲಾಗುತ್ತಿದೆ. ಹಾಗಾಗಿ ಇದನ್ನು ಒಂದು ವಿಜ್ಞಾನ ಶಾಸ್ತ್ರವಾಗಿ ನಾವು ನೋಡಬೇಕಾಗಿದೆ. ಸರ್ಕಾರಗಳು ಪಠ್ಯಕ್ರಮಗಳನ್ನು ರೂಪಿಸುತ್ತಲೇ ಹೋಗುತ್ತವೆ. ಆಯಾ ಕಾಲಕ್ಕೆ ತಕ್ಕಂತೆ ರೂಪಿಸುವ ಪಠ್ಯಕ್ರಮಗಳಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈಗ ಎನ್‍ಇಪಿಯಿಂದ ನಾವು ಎಸ್‍ಇಪಿಗೆ ಬರುತ್ತಿದ್ದೇವೆ. ಇದರ ಆಧಾರದಲ್ಲಿ ಈ ಕಾರ್ಯಾಗಾರಗಳು ನಡೆಯುತ್ತಿವೆ ಎಂದು ತಿಳಿಸಿದರು.
ಶಿಕ್ಷಕರು ಪಠ್ಯವನ್ನು ಬೋಧಿಸುವುದರ ಜೊತೆಗೆ ಅದನ್ನು ಚರ್ಚೆಮಾಡಲು ಪೂರಕವಾತಾವರಣವನ್ನು ಕಲ್ಪಿಸಬೇಕು ಮತ್ತು ಯಾವುದೇ ಪಠ್ಯ ಇರಲಿ ಅದನ್ನು ವರ್ತಮಾನದ ವಿಷಯಗಳನ್ನು ಸಮೀಕರಿಸಬೇಕಾಗುತ್ತದೆ. ಪಠ್ಯದ ಆಚೆಗೂ ಅವರು ನಿಂತು ನೋಡಬೇಕಾಗಿದೆ ಎಂದರು.ಪ್ರಸ್ತುತ ಯುವಕರಲ್ಲಿ ರಾಜಕೀಯ ಪ್ರಜ್ಞೆ ಕಡಿಮೆಯಾಗುತ್ತಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಬರುವ ರಾಜಕಾರಣದ ಚರ್ಚೆಗಳೇ ರಾಜಕೀಯ ಎಂದು ನಂಬಿ ಬಿಡುತ್ತಾರೆ. ರಾಜಕೀಯ ಕೌಶಲ್ಯವನ್ನು ಅವರಿಗೆ ಬೋಧಿಸಬೇಕಾದ ಅವಶ್ಯಕತೆ ಇದೆ ಎಂದರು.ನಮ್ಮ ರಾಜಕೀಯ ಚರಿತ್ರೆಗಳು ಕೂಡ ತಿರುಚುವಂತಹ ಹೊಸ ವ್ಯಾಖ್ಯಾನ ಕೊಡುವಂತಹ ಸನ್ನಿವೇಶಗಳು ಈಗ ಮೂಡುತ್ತಿವೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶವನ್ನು ಬಲಿಷ್ಠವನ್ನಾಗಿ ಮಾಡಿದ ವ್ಯಕ್ತಿಗಳನ್ನು ಇಂದು ಅತ್ಯಂತ ಕೀಳಾಗಿ ಕಾಣುವಂತಹ ಪರಿಸ್ಥಿತಿ ಬಂದಿದೆ. ಮಕ್ಕಳಿಗೆ ಸತ್ಯಹೇಳಬೇಕು. ಸತ್ಯಹೇಳುವಾಗ ಯಾವ ಮಡಿವಂತಿಕೆಯೂ ಇರಬಾರದು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕುವೆಂಪು ವಿವಿ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಉಪಾಧ್ಯಕ್ಷ ಪ್ರೊ.ಪ್ರಹ್ಲಾದ್.ಎಂ.ಎಚ್, ಶಿಕ್ಷಣ ಕುತೂಹಲವನ್ನು ಹುಟ್ಟಿಸುತ್ತದೆ ಮತ್ತು ಪಠ್ಯಗಳು ವಿದ್ಯಾರ್ಥಿಗಳ ಆಧಾರಸ್ತಂಭಗಳಾಗಿವೆ. ರಾಜ್ಯಶಾಸ್ತ್ರಕ್ಕೆ ಈಗ ಎಲ್ಲಿಲ್ಲದ ಗೌರವ ಬರುತ್ತಿದೆ. ಪಠ್ಯಗಳನ್ನು ಬೋಧಿಸುವ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ವೃದ್ಧಿಸಬೇಕು. ಉಪನ್ಯಾಸಕರಿಗೆ ಪಠ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಎಸ್‍ಇಪಿಯ ಉದ್ದೇಶಗಳನ್ನ ತಿಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ತಿಳಿಸಿದರು.ಕುವೆಂಪು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ತಿಮ್ಮರಾಯಪ್ಪ ಮಾತನಾಡಿ, ರಾಜಧರ್ಮ ಎಂಬುವುದು ನಮ್ಮ ವೃತ್ತಿ ಜೀವನಕ್ಕೂ ಅನ್ವಯಿಸುತ್ತದೆ. ರಾಜ್ಯಶಾಸ್ತ್ರ ಒಂದು ಮಾನವಿಕ ಶಾಸ್ತ್ರವೂ ಹೌದು. ಜ್ಞಾನ, ಉದ್ಯೋಗ ಎರಡನ್ನೂ ಪಠ್ಯಕ್ರಮಗಳು ಒಳಗೊಂಡಿರಬೇಕು ಮತ್ತು ಇದನ್ನು ರೂಪಿಸುವಾಗ ಐಎಎಸ್, ಕೆಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನುಕೂಲವಾಗುವಂತಿರಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿವಿ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಕೆ.ಪ್ರಸನ್ನಕುಮಾರ್ ವಹಿಸಿದ್ದರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಸಿರಾಜ್ ಅಹ್ಮದ್, ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ಎ.ಷಣ್ಮುಖ, ರಾಜ್ಯಶಾಸ್ತ್ರ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ.ಉದ್ದಗಟ್ಟಿ ವೆಂಕಟೇಶ್, ಪರೀಕ್ಷಾ ಮಂಡಳಿ ಅಧ್ಯಕ್ಷ ಎಂ.ಸಿ.ವಿಜಯಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಬಸವರಾಜ್, ಡಾ.ಜಗದೀಶ್, ಕಲಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಎನ್.ಮಂಜುನಾಥ್, ಸಂಘದ ನಿರ್ದೇಶಕಿ ಬಿ.ಡಿ.ಶ್ರೀದೇವಿ, ಮಂಜುಳಾ ಸೇರಿದಂತೆ ಹಲವರಿದ್ದರು.