ಡಾ.ಪ್ರಭಾಕರ ಭಟ್‌ ಕೂಡಲೇ ಬಂಧಿಸಿ: ಸರ್ಕಾರಕ್ಕೆ ಜಾತ್ಯತೀತ ಪಕ್ಷ ಸಂಘಟನೆಗಳ ಜಂಟಿ ವೇದಿಕೆ ಒತ್ತಾಯ

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನು ಶೀಘ್ರವೇ ಬಂಧಿಸುವಂತೆ ಜಾತ್ಯತೀತ ಸಂಘಟನೆ ಸರ್ಕಾರಕ್ಕೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಮಂಡ್ಯದಲ್ಲಿ ನಡೆದ ಹಿಂದು ಸಂಘಟನೆಯ ಸಮಾವೇಶದಲ್ಲಿ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ವಿರುದ್ಧ ಜಾಮೀನು ರಹಿತ ಕೇಸು ದಾಖಲಾಗಿದ್ದು, ಅವರನ್ನು ಬಂಧಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಜಾತ್ಯತೀತ ಪಕ್ಷ ಸಂಘಟನೆಗಳ ಜಂಟಿ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಂಟಿ ವೇದಿಕೆ ಅಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ, ಡಾ.ಪ್ರಭಾಕರ ಭಟ್‌ ಅವರ ಹೇಳಿಕೆ ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರವಲ್ಲ ಇಡೀ ಮಹಿಳಾಕುಲಕ್ಕೆ ಅಪಮಾನವಾಗಿದೆ. ಅವರನ್ನು ಬಂಧಿಸಿದರೆ ಶಾಂತಿಕದಡುವ ವಾತಾವರಣ ಎಲ್ಲಿಯೂ ನಿರ್ಮಾಣವಾಗುವುದಿಲ್ಲ. ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿ ಬಳಿಗೆ ವೇದಿಕೆಯ ನಿಯೋಗ ತೆರಳಲಿದೆ ಎಂದರು.

ರಾಜಕೀಯ ಲಾಭಕ್ಕಾಗಿ ಈ ರೀತಿ ಭಾಷಣ ಮಾಡಿ ಕೋಮು ದ್ವೇಷ ಹರಡುವ ಹುನ್ನಾರ ಇದರ ಹಿಂದೆ ಇದೆ. ಈಗಾಗಲೇ ಅನೇಕ ಕಡೆಗಳಲ್ಲಿ ಅವರ ವಿರುದ್ಧ ಕೇಸು ದಾಖಲಾಗಿದ್ದು, ಸರ್ಕಾರ ಕೂಡಲೇ ಡಾ.ಪ್ರಭಾಕರ ಭಟ್‌ ಅ‍ವರನ್ನು ಬಂಧಿಸಲು ಮುಂದಾಗಬೇಕು. ಅವರ ಬಂಧನದಿಂದ ಯಾವುದೇ ಶಾಂತಿಕದಡುವ ಸಾಧ್ಯತೆ ಇಲ್ಲ. ಇಡೀ ಸಮಾಜ ಸರ್ಕಾರದ ಬೆಂಬಲಕ್ಕೆ ಇರಲಿದೆ ಎಂಬ ವಿಶ್ವಾಸ ಇದೆ ಎಂದರು.

ಪ್ರಚೋದನಾಕಾರಿ ಭಾಷಣ ಎಂಬುದು ಈಗ ಚಾಳಿಯಾಗಿದ್ದು, ಅಂತಹ ಸಂದರ್ಭದಲ್ಲಿ ಸ್ವಯಂ ಆಗಿ ಕೇಸು ದಾಖಲಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಕೂಡ ನಿರ್ದೇಶನ ನೀಡಿದೆ. ಡಾ.ಪ್ರಭಾಕರ ಭಟ್‌ ಅವರು ಮುಸ್ಲಿಂ ಮಾತ್ರವಲ್ಲ ಹಿಂದು, ಕ್ರೈಸ್ತರನ್ನೂ ಅಪಮಾನಿಸಿದ್ದಾರೆ. ಈ ಎಲ್ಲ ವಿಚಾರಗಳಲ್ಲಿ ಸಿಎಂ ಬಳಿಗೆ ನಿಯೋಗ ತೆರಳಲಿದ್ದೇವೆ ಎಂದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಮುನೀರ್‌ ಕಾಟಿಪಳ್ಳ ಮಾತನಾಡಿ, ಡಾ.ಪ್ರಭಾಕರ ಭಟ್‌ ಅವರು ಅವಹೇಳನಕಾರಿಯಾಗಿ ಮಾತನಾಡಿಲ್ಲ, ಅದನ್ನು ತಿರುಚಲಾಗಿದೆ ಎಂದು ಸಂಸದ ನಳಿನ್‌ ಕುಮಾರ್ ಹೇಳಿದ್ದಾರೆ. ತಿರುಚಿದ್ದು ಏನು ಎಂಬುದನ್ನು ನಳಿನ್‌ ಕುಮಾರ್‌ ಸ್ಪಷ್ಟಪಡಿಸಲಿ. ಅಲ್ಲದೆ, ಈ ಬಗ್ಗೆ ಬಿಜೆಪಿ ನಿಲುವು ಏನು ಎಂಬುದನ್ನೂ ತಿಳಿಸಲಿ ಎಂದರು.

ಡಾ.ಪ್ರಭಾಕರ ಭಟ್ಟರು ಹಿಂದಿನಿಂದಲೂ ಮಹಿಳೆಯರನ್ನು ಅವಹೇಳನ ಮಾಡುತ್ತಾ ಬಂದಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ತುಟಿಪಿಟಿಕ್‌ ಎನ್ನದ ಅವರು ಸಾಮರಸ್ಯಕ್ಕೆ ಧಕ್ಕೆ ತರುವ ವಿಚಾರದಲ್ಲಿ ಮಾತನಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಆದಷ್ಟು ಬೇಗ ಅವರನ್ನು ಬಂಧನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುನೀರ್‌ ಕಾಟಿಪಳ್ಳ ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಎಂ.ಜಿ.ಹೆಗಡೆ ಮಾತನಾಡಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಇದೊಂದು ಬಿಜೆಪಿ ಹಾಗೂ ಸಂಘಪರಿವಾರದ ಟೋಲ್‌ಕಿಟ್‌ ಆಗಿದೆ. ಇಂತಹ ವಿದ್ಯಮಾನಗಳು ಇನ್ನೂ ನಡೆಯುವ ಸಾಧ್ಯತೆ ಇದೆ. ಎಲ್ಲ ಸಮುದಾಯಗಳೂ ಅಹಿತಕರ ಘಟನೆಗೆ ಆಸ್ಪದ ನೀಡದೆ ಜಾಗೃತವಾಗಿರಬೇಕು. ಕಲ್ಲಡ್ಕ ಶಾಲೆಗೆ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕರೆಸಿ ಟ್ರಂಪ್‌ ಕಾರ್ಡ್‌ ಆಗಿ ಬಳಸುತ್ತಿದ್ದಾರೆ. ಹಾಗಾಗಿ ಡಾ.ಪ್ರಭಾಕರ ಭಟ್ಟರನ್ನು ಬಂಧಿಸುವುದೇ ಪರಿಹಾರ ಎಂದರು.

ಮುಖಂಡರಾದ ಶೇಖರ್‌, ದೇವದಾಸ್‌, ಶಾಹುಲ್‌ ಹಮೀದ್‌, ನ್ಯಾಯವಾದಿ ದಿನೇಶ್‌ ಹೆಗ್ಡೆ ಉಳಿಪಾಡಿ, ಯಾದವ ಶೆಟ್ಟಿ, ಕರುಣಾಕರ ಮಾರಿಪಳ್ಳ, ಸುಬೋಧ್‌ ಆಳ್ವ, ಆದಿತ್ಯ ಕಲ್ಲಾಜೆ ಮತ್ತಿತರರಿದ್ದರು.

Share this article