ಡಿಜೆ ಸೌಂಡ್‌ ಬಳಸದೇ ಉರುಸ್‌ ಆಚರಣೆ: ಪ್ರಶಂಸೆ

KannadaprabhaNewsNetwork |  
Published : Jan 14, 2025, 01:05 AM IST
12 ಎಚ್‍ಆರ್‍ಆರ್ 1 ಹರಿಹರ: ಹರಿಹರದ ಶಿವಮೊಗ್ಗ ಸರ್ಕಲ್ ಬಳಿಯ ಬಾಹರ್ ಮಕಾನ್ ಹಜರತ್ ಅಹ್ಮದ್ ಷಾ ಮತ್ತು ಮೊಹಮ್ಮದ್  ಷಾವಲಿ ದರ್ಗಾ ಮುಂದೆ ನೌಜವಾನ್ ಕಮಿಟಿ ಪದಾಧಿಕಾರಿಗಳಿರುವುದು.12 ಎಚ್‍ಆರ್‍ಆರ್ 02ಎಚ್‍ಎಎಂ ನೌಜವಾನ್ ಕಮಿಟಿ ಅಧ್ಯಕ್ಷ ನಸರುಲ್ಲಾ ಮಕಾಂದಾರ್ | Kannada Prabha

ಸಾರಾಂಶ

ನಗರದ ಶಿವಮೊಗ್ಗ ಸರ್ಕಲ್ ಸಮೀಪದ ಬಾಹರ್ ಮಕಾನ್ ಹಜರತ್ ಅಹ್ಮದ್ ಷಾ ಮತ್ತು ಮೊಹಮ್ಮದ್ ಷಾ ವಲಿ ದರ್ಗಾದಲ್ಲಿ ಜ.9ರಿಂದ 11ರವರೆಗೆ ದರ್ಗಾದ ಗಂಧ (ಉರುಸ್) ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ ಡಿ.ಜೆ. ಬಳಸದೇ, ಧಾರ್ಮಿಕ ಆಚರಣೆ ನೆರವೇರಿಸಿ, ಹರಿಹರದಲ್ಲಿ ಹೊಸತನಕ್ಕೆ ನಾಂದಿ ಹಾಡಲಾಗಿದೆ.

- ಮುಸ್ಲಿಂ ಬಡಮಕ್ಕಳ ನೆರವಿಗೆ ಡಿಜೆ ಸೌಂಡ್‌ ಹಣ ಬಳಕೆಗೆ ದರ್ಗಾ ಕಮಿಟಿ ನಿರ್ಧಾರ - - - ಕನ್ನಡಪ್ರಭ ವಾರ್ತೆ ಹರಿಹರ

ನಗರದ ಶಿವಮೊಗ್ಗ ಸರ್ಕಲ್ ಸಮೀಪದ ಬಾಹರ್ ಮಕಾನ್ ಹಜರತ್ ಅಹ್ಮದ್ ಷಾ ಮತ್ತು ಮೊಹಮ್ಮದ್ ಷಾ ವಲಿ ದರ್ಗಾದಲ್ಲಿ ಜ.9ರಿಂದ 11ರವರೆಗೆ ದರ್ಗಾದ ಗಂಧ (ಉರುಸ್) ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ ಡಿ.ಜೆ. ಬಳಸದೇ, ಧಾರ್ಮಿಕ ಆಚರಣೆ ನೆರವೇರಿಸಿ, ಹೊಸತನಕ್ಕೆ ನಾಂದಿ ಹಾಡಲಾಗಿದೆ.

ಈ ದರ್ಗಾದಲ್ಲಿ ಡಿ.ಜೆ. ಇಲ್ಲದೇ 3 ದಿನಗಳ ಕಾಲ ಕಾರ್ಯಕ್ರಮ ಆಚರಿಸಲಾಗಿದೆ. ಡಿ.ಜೆ. ಸೌಂಡ್‌ ಸಿಸ್ಟಂಗಾಗಿ ವ್ಯಯ ಮಾಡಬೇಕಿದ್ದ ಖರ್ಚನ್ನು ಮುಸ್ಲಿಂ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ದರ್ಗಾದ ಎಚ್‍ಎಎಂ ನೌ ಜವಾನ್ ಕಮಿಟಿ ನಿರ್ಧರಿಸಿದೆ. ಅಲ್ಲದೇ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಡಿ.ಜೆ. ಸೌಂಡ್ ಬಳಸುವುದಿಲ್ಲ ಎಂಬ ಇರಾದೆಗೆ ದರ್ಗಾ ಬಂದಿದೆ.

ನಗರದ ವಿವಿಧ ಮಸೀದಿಗಳ ಆಡಳಿತ ಮಂಡಳಿ ಹಾಗೂ ಸಾಮಾಜಿಕವಾಗಿ ಚಿಂತನೆ ಮಾಡುವವರ ತಂಡವು ಇತ್ತೀಚಿಗೆ ನಗರದ ಎಲ್ಲ ಮಸೀದಿಗಳಿಗೆ ಡಿ.ಜೆ. ಸೌಂಡ್ ಸಿಸ್ಟಂ ಬಳಕೆ ಮಾಡಬಾರದೆಂಬ ಮನವಿ ಕಳಿಸಿಕೊಟ್ಟಿತ್ತು. ಅನಂತರ ಹರಿಹರ ತಾಲೂಕು ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳಿಗೂ ಮನವಿ ನೀಡಿ ಡಿ.ಜೆ. ಬಳಕೆ ನಿಷೇಧಿಸಲು ಆಗ್ರಹಿಸಲಾಗಿತ್ತು.

ಮೆರವಣಿಗೆ, ರಾತ್ರಿ ಪ್ರವಚನ, ಖವ್ವಾಲಿ ಸೇರಿದಂತೆ ಮೂರು ದಿನಗಳ ಉರುಸ್ ಕಾರ್ಯಕ್ರಮವು ಸಾಮಾಜಿಕ ಸಂಘಟಕರ ಮನವಿಗೆ ಸ್ಪಂದಿಸಿದೆ. ಸಂಘಟಕರು ಹೇಳಿದಂತೆ ಅಬ್ಬರದ ಡಿ.ಜೆ. ಸೌಂಡ್‌ ಇಲ್ಲದೇ 3 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಆಚರಿಸಲಾಗಿದೆ.

ಉರುಸ್ ಸಂದರ್ಭ ಡಿ.ಜೆ. ಬಳಕೆ ಮಾಡದೇ ಶಾಂತ ರೀತಿಯಿಂದ ಆಚರಿಸಿದ ಕ್ರಮವನ್ನು ಬಾಹರ್ ಮಕಾನ್, ಶೋಭಾ ಟಾಕೀಸ್ ಸರ್ಕಲ್, ಶಿವಮೊಗ್ಗ ಸರ್ಕಲ್‍ನ ಸರ್ವ ಸಮುದಾಯದ ಜನರು ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನು ಎಲ್ಲ ಧರ್ಮೀಯರೂ ಪಾಲಿಸಬೇಕೆಂಬ ಅಪೇಕ್ಷೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಎಚ್‍ಎಎಂ ನೌಜವಾನ್ ಕಮಿಟಿ ಅಧ್ಯಕ್ಷ ನಸರುಲ್ಲಾ ಮಕಾಂದಾರ್, ಪದಾಧಿಕಾರಿಗಳಾದ ಬಾಬುಜಾನ್, ಅಫತಾಬ್, ಅಜಗರ್ ಅಲಿ, ಶಮ್ಸ್ ಖಾನ್ ಸೇರಿದಂತೆ ಹಲವು ಯುವಕರು ಡಿ.ಜೆ. ರಹಿತ ಉರುಸ್ ಆಚರಣೆಗೆ ಶ್ರಮಿಸಿದ್ದಾರೆ.

- - -

ಕೋಟ್‌

ಶಬ್ದದ ಅಬ್ಬರ ಸೃಷ್ಟಿಸುವ ಡಿ.ಜೆ. ಸೌಂಡ್ ಸಿಸ್ಟಂ ಬಳಸಬಾರದೆಂಬ ಸಮುದಾಯದ ಮುಖಂಡರ ಕರೆಗೆ ನಾವು ಗೌರವ ಕೊಟ್ಟಿದ್ದೇವೆ. ಮಹಾತ್ಮರ ಪುಣ್ಯಸ್ಮರಣೆ, ಹಬ್ಬದ ಆಚರಣೆಗಳು ಯಾರೊಬ್ಬರಿಗೂ ಕಿರಿಕಿರಿ ಉಂಟು ಮಾಡಬಾರದು. ಕಿರಿಕಿರಿ ಸೃಷ್ಟಿಸಿದರೆ ಅಂತಹ ಆಚರಣೆಗಳಿಗೆ ಬೆಲೆಯೇ ಇರುವುದಿಲ್ಲ. ಮುಂದೆ ನಡೆಯುವ ಉರುಸ್‌ಗಳನ್ನು ಡಿ.ಜೆ. ಸೌಂಡ್ಸ್‌ ರಹಿತವಾಗಿ ಇರುವಂತೆ ನೋಡಿಕೊಳ್ಳುತ್ತೇವೆ

- ನಸರುಲ್ಲಾ ಮಕಾಂದಾರ್, ಅಧ್ಯಕ್ಷ, ಎಚ್‍ಎಎಂ ನೌಜವಾನ್ ಕಮಿಟಿ

- - - -12ಎಚ್‍ಆರ್‍ಆರ್1:

ಹರಿಹರದ ಶಿವಮೊಗ್ಗ ಸರ್ಕಲ್ ಬಳಿಯ ಬಾಹರ್ ಮಕಾನ್ ಹಜರತ್ ಅಹ್ಮದ್ ಷಾ ಮತ್ತು ಮೊಹಮ್ಮದ್ ಷಾವಲಿ ದರ್ಗಾದಲ್ಲಿ ಸರಳವಾಗಿ ಉರುಸ್‌ ಆಚರಿಸಲಾಯಿತು. ನೌಜವಾನ್ ಕಮಿಟಿ ಪದಾಧಿಕಾರಿಗಳು ಇದ್ದಾರೆ. -12ಎಚ್‍ಆರ್‍ಆರ್02: ನಸರುಲ್ಲಾ ಮಕಾಂದಾರ್‌

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ