ವೈಜ್ಞಾನಿಕ ವಿಧಾನದಲ್ಲಿ ರಸಗೊಬ್ಬರ ಬಳಸಿ: ಡಿಸಿ

KannadaprabhaNewsNetwork |  
Published : Jun 05, 2026, 02:15 AM IST
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ.  | Kannada Prabha

ಸಾರಾಂಶ

ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ವರ್ಮಿ ಕಾಂಪೋಸ್ಟ್(ಎರೆಹುಳು ಗೊಬ್ಬರ), ಹಸಿರು ಗೊಬ್ಬರ, ಜೈವಿಕ ಗೊಬ್ಬರ ಹಾಗೂ ಬೆಳೆ ಅವಶೇಷಗಳಿಂದ ತಯಾರಿಸಿದ ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು.

ಗದಗ: ಜಿಲ್ಲೆಯ ರೈತರು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದರ ಜತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ರಸಗೊಬ್ಬರಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಗೂ ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಯೂರಿಯಾ ಬಳಕೆ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಮಣ್ಣಿನ ಫಲವತ್ತತೆ ಕುಸಿತ, ಪೋಷಕಾಂಶಗಳ ಅಸಮತೋಲನ, ಉತ್ಪಾದನಾ ವೆಚ್ಚದ ಹೆಚ್ಚಳ ಹಾಗೂ ಪರಿಸರ ಮಾಲಿನ್ಯದಂಥ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ರೈತರು ಮಣ್ಣಿನ ಪರೀಕ್ಷೆ ಆಧರಿತ ಪೋಷಕಾಂಶ ನಿರ್ವಹಣೆಯನ್ನು ಕಡ್ಡಾಯವಾಗಿ ಅನುಸರಿಸಬೇಕು.

ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ವರ್ಮಿ ಕಾಂಪೋಸ್ಟ್(ಎರೆಹುಳು ಗೊಬ್ಬರ), ಹಸಿರು ಗೊಬ್ಬರ, ಜೈವಿಕ ಗೊಬ್ಬರ ಹಾಗೂ ಬೆಳೆ ಅವಶೇಷಗಳಿಂದ ತಯಾರಿಸಿದ ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು. ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗಿ ಮಣ್ಣಿನ ರಚನೆ, ನೀರು ಹಿಡಿದಿಡುವ ಸಾಮರ್ಥ್ಯ ಹಾಗೂ ಸೂಕ್ಷ್ಮಜೀವಿಗಳ ಚಟುವಟಿಕೆಗಳು ಉತ್ತಮಗೊಳ್ಳುತ್ತವೆ. ರೈತರು ಸರಿಯಾದ ಗೊಬ್ಬರ, ಸರಿಯಾದ ಪ್ರಮಾಣ, ಸರಿಯಾದ ಸಮಯ ಹಾಗೂ ಸರಿಯಾದ ವಿಧಾನ ಎಂಬ ತತ್ವವನ್ನು ಅನುಸರಿಸುವುದರಿಂದ ಗೊಬ್ಬರ ಬಳಕೆಯ ದಕ್ಷತೆ ಹೆಚ್ಚುವುದರ ಜತೆಗೆ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ.

ಜಿಲ್ಲೆಯಲ್ಲಿ ನ್ಯಾನೋ ಯೂರಿಯಾ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಇದರ ಬಳಕೆಯಿಂದ ಸಸ್ಯಗಳಿಗೆ ಸಾರಜನಕ ಪೋಷಕಾಂಶವು ಪರಿಣಾಮಕಾರಿಯಾಗಿ ದೊರೆಯುತ್ತದೆ. ಇದು ರಾಸಾಯನಿಕ ಯೂರಿಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, ಗೊಬ್ಬರ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಕೃಷಿ ಇಲಾಖೆಯ ಶಿಫಾರಸಿನಂತೆ ನ್ಯಾನೋ ಯೂರಿಯಾವನ್ನು ರೈತರು ಬಳಸಬೇಕು. ಕಾಳಸಂತೆ, ಅಕ್ರಮ ಸಂಗ್ರಹಣೆ ಅಥವಾ ಅಧಿಕ ದರದಲ್ಲಿ ಗೊಬ್ಬರ ಮಾರಾಟ ಮಾಡುವಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕೃಷಿ ಇಲಾಖೆ ಅಥವಾ ಜಿಲ್ಲಾ ಆಡಳಿತದ ಗಮನಕ್ಕೆ ತರಬೇಕು. ರೈತರಿಗೆ ಅಗತ್ಯ ಪ್ರಮಾಣದ ಗೊಬ್ಬರ ಲಭ್ಯವಾಗುವಂತೆ ಜಿಲ್ಲಾ ಆಡಳಿತವು ಸೂಕ್ತ ಕ್ರಮ ಕೈಗೊಂಡಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ