ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಶುಕ್ರವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕರಪತ್ರ ಹಂಚಿ ಸರ್ಕಾರದ ನಡೆ ಖಂಡಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ಪಿ ರಾಜ್ಯ ಉಸ್ತುವಾರಿ ಎಂ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್ ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನ ೨ ವರ್ಷಗಳಲ್ಲಿ ೨೫ ಸಾವಿರದ ೩೯೯ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಎಸ್ಸಿ, ಎಸ್ಟಿಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ ಎಂದರು.ಇದುವರೆಗೆ ೭೦ ಸಾವಿರ ಕೋಟಿ ರು.ಗಳ ದುರ್ಬಳಕೆಯಾಗಿದೆ ಎನ್ನಲಾಗಿದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಜಾರಿಯಾದಾಗಿನಿಂದ ಇದುವರೆಗೆ ೨ ಲಕ್ಷದ ೫೬ ಸಾವಿರ ಕೋಟಿ ರು.ಗಳನ್ನು ಈ ಯೋಜನೆಗೆ ಒದಗಿಸಲಾಗಿದೆ ಎಂದರು. ಇಷ್ಟು ಹಣದಿಂದ ಕರ್ನಾಟಕದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಬಿಇ, ಎಂಬಿಬಿಎಸ್, ಪಿಎಚ್.ಡಿ ವರೆಗೆ ಉಚಿತ ಶಿಕ್ಷಣ, ಲಕ್ಷಾಂತರ ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ, ಮನೆ ಇಲ್ಲದ ಪ್ರತಿಯೊಂದು ಎಸ್ಸಿ, ಎಸ್ಟಿ ಕುಟುಂಬಗಳಿಗೆ ಸ್ವಂತ ಮನೆ, ರೋಗಿಗಳಿಗೆ ಉಚಿತ ಚಿಕಿತ್ಸೆ, ಭೂರಹಿತ ಕೃಷಿಕಾರ್ಮಿಕರಿಗೆ ತಲಾ ೫ ಎಕರೆ ಜಮೀನು ಕೊಡಬಹುದಿತ್ತು ಎಂದರು.ಈ ಯೋಜನೆ ಶೇ.೧೦ ರಷ್ಟು ಕೂಡ ಎಸ್ಸಿ,ಎಸ್ಟಿಗಳಿಗೆ ನೇರವಾಗಿ ತಲುಪುತ್ತಿಲ್ಲ. ಬದಲಾಗಿ ಅಧಿಕಾರಿಗಳು ಮತ್ತು ಮಂತ್ರಿ, ಶಾಸಕರು ನುಂಗಿ ನೀರು ಕುಡಿಯುತ್ತಿದ್ದಾರೆ. ಎಸ್ಟಿಗಳ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ೧೮೭ ಕೋಟಿ ರು.ಗಳ ಹಗರಣವೇ ಇದಕ್ಕೇ ಸಾಕ್ಷಿ ಎಂದರು.
೨೦೨೩ರ ವಿಧಾನಸಭೆ ಮತ್ತು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ. ಮೀಸಲಾತಿಯನ್ನು ರದ್ದು ಮಾಡುತ್ತದೆ ಎಂದು ಭಾವನಾತ್ಮಕವಾಗಿ ಎಸ್ಸಿ,ಎಸ್ಟಿ, ಓಬಿಸಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆರಳಿಸಿ, ಈ ವರ್ಗದ ಶೇ.೯೦ ರಷ್ಟು ಮತಗಳನ್ನು ಪಡೆದುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಂದು ಈ ವರ್ಗದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದರು,ಚುನಾವಣೆಯಲ್ಲಿ ಭರವಸೆ ನೀಡಿದ್ದಂತೆ ಸಾವಿರಾರು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ ನೀಡುತ್ತಿಲ್ಲ. ಸಮಾಜಕ್ಕೆ ಇಷ್ಟೆಲ್ಲಾ ಆನ್ಯಾಯವಾಗುತ್ತಿದ್ದರೂ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಒಬ್ಬ ಶಾಸಕನೂ ಬಾಯಿ ಬಿಡುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬೋವಿ ಅಭಿವೃದ್ಧಿ ನಿಗಮದಲ್ಲಿ ೮೭ ಕೋಟಿ, ಎಸ್ಸಿ,ಎಸ್ಟಿಗಳ ಗಂಗಾ ಕಲ್ಯಾಣ ಯೋಜನೆಯಲ್ಲಿ ೪೩೮ ಕೋಟಿ ಹಗರಣಗಳು ನಡೆದಿವೆ. ಇದರ ಜೊತೆಗೆ ಬಿಜೆಪಿ ಸರ್ಕಾರ ಇದ್ದಾಗ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ೧೯ ಸಾವಿರ ಕೋಟಿ ರು.ಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದರು.ಸಂವಿಧಾನ ಉಳಿಸುತ್ತೇವೆಂದು ಕಾಂಗ್ರೆಸ್ ಸರ್ಕಾರ ನಮಗೆ ಸಂವಿಧಾನಾತ್ಮಕವಾಗಿ ನೀಡಿರುವ ಎಲ್ಲಾ ಹಕ್ಕುಗಳನ್ನು ಮತ್ತು ಯೋಜನೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರದ್ದು ಮಾಡುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎನ್. ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಅಮಚವಾಡಿ ಪ್ರಕಾಶ್, ಮೂರ್ತಿಮ ಬಾ.ಮ.ಕೃಷ್ಣಮೂರ್ತಿ, ಚಂದ್ರಕಾಂತ್, ದೊಡ್ಡರಾಯಪೇಟೆ ಕೃಷ್ಣಮೂರ್ತಿ ಇತರರು ಭಾಗವಹಿಸಿದ್ದರು.