ಹೆಚ್ಚು ಇಳುವರಿಗೆ ಉತ್ತಮ ಪೋಷಕಾಂಶ ಬಳಸಿ: ಆರ್.ರಜನೀಕಾಂತ

KannadaprabhaNewsNetwork |  
Published : Jul 06, 2025, 01:48 AM IST
ಚಿತ್ರ 2 | Kannada Prabha

ಸಾರಾಂಶ

ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಈರುಳ್ಳಿ ಉತ್ಪಾದನೆ ಪಡೆಯಲು ರೈತರು ಸೂಕ್ತ ತಳಿಯ ಆಯ್ಕೆ, ಮಣ್ಣು ಮಾದರಿ ಆಧಾರಿತ ಪೋಷಕಾಂಶಗಳ ನಿರ್ವಹಣೆ ಹಾಗೂ ಹೆಚ್ಚಿನ ಸಾವಯವ ಗೊಬ್ಬರ ಬಳಸುವುದು ಸೂಕ್ತ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಈರುಳ್ಳಿ ಉತ್ಪಾದನೆ ಪಡೆಯಲು ರೈತರು ಸೂಕ್ತ ತಳಿಯ ಆಯ್ಕೆ, ಮಣ್ಣು ಮಾದರಿ ಆಧಾರಿತ ಪೋಷಕಾಂಶಗಳ ನಿರ್ವಹಣೆ ಹಾಗೂ ಹೆಚ್ಚಿನ ಸಾವಯವ ಗೊಬ್ಬರ ಬಳಸುವುದು ಸೂಕ್ತ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು.

ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಸುಧಾರಿತ ಈರುಳ್ಳಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯು ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರಮುಖ ತರಕಾರಿ ಬೆಳೆಯಾಗಿದ್ದು ಮುಖ್ಯವಾಗಿ ಚಿತ್ರದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಸದರಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬೇಕಾದ ಬೇಸಾಯ ಕ್ರಮಗಳು ಹಾಗೂ ಕೀಟ ಮತ್ತು ರೋಗ ನಿರ್ವಹಣೆ ಕುರಿತ ತಾಂತ್ರಿಕ ಮಾಹಿತಿಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ತೋಟಗಾರಿಕೆ ಮಹಾವಿದ್ಯಾಲಯದ ತರಕಾರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ್ ಕೆರೂರ ಮಾತನಾಡಿ, ಈರುಳ್ಳಿ ಬಿತ್ತನೆಯ ಸಮಯ, ಬೆಳೆಯ ವಿವಿಧ ತಳಿಗಳು, ರಸಗೊಬ್ಬರದ ಪ್ರಮಾಣ, ಬಿತ್ತನೆ ಬೀಜ ಬಳಸುವ ಪ್ರಮಾಣ, ಬೀಜೋಪಚಾರದ ಪ್ರಾಮುಖ್ಯತೆ, ಬೆಳೆಯಲ್ಲಿ ಸಸಿ ಮಡಿ ಮಾಡುವ ವಿಧಾನ, ಕಳೆ ನಿರ್ವಹಣೆ ಮತ್ತು ನೀರು ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ತದನಂತರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ತಾಕಿಗೆ ಭೇಟಿ ನೀಡಿ ಈರುಳ್ಳಿ ಬೆಳೆಯ ವಿವಿಧ ತಳಿಗಳ ಪ್ರಯೋಗದ ಪ್ರಾತ್ಯಕ್ಷಿಕೆ ತಾಕಿಗೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಶರಣಪ್ಪ ಜಂಗಂಡಿಯವರು ಹೊಸದಾಗಿ ತಯಾರಿಸಿದ ಈರುಳ್ಳಿಯ ಮೇಲಿನ ಜುಟ್ಟು ಕತ್ತರಿಸುವ ಯಂತ್ರದ ಕುರಿತು ಮಾಹಿತಿ ನೀಡಿದರು.

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ.ಟಿ.ರುದ್ರಮುನಿ, ಈರುಳ್ಳಿ ಬೆಳೆಯಲ್ಲಿ ಬರುವ ಪ್ರಮುಖ ಕೀಟಗಳಾದ ಥ್ರೀಪ್ಸ್, ನುಸಿ, ತಂಬಾಕಿನ ಹುಳು ಹಾಗೂ ಪ್ರಮುಖ ರೋಗಗಳಾದ ನೇರಳೆ ಮಚ್ಚೆ ರೋಗ, ದುಂಡಾಣು ಗೆಡ್ಡೆಕೊಳೆ ರೋಗಗಳ ಸಮಗ್ರ ನಿರ್ವಹಣೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

PREV