- ಎಳೆಹೊಳೆಯಲ್ಲಿ ಮಣ್ಣಿನ ಫಲವತ್ತತೆ ಅರಿವು ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ
ಕೃಷಿಯಲ್ಲಿ ಹೆಚ್ಚಿನ ಪ್ರಮಾಣದ ರಸಗೊಬ್ಬರಗಳನ್ನು ಉಪಯೋಗಿಸಿದರೆ ಮಣ್ಣಿನ ಫಲವತ್ತತೆ ಕಳೆದುಹೋಗುವುದು. ಆದ್ದರಿಂದ ರೈತರು ಸೆಣಬು, ಡಯಾಂಚ, ಅಲಸಂದೆ ಬೆಳೆಗಳನ್ನು ಬೆಳೆದು ಮಣ್ಣಿನಲ್ಲಿ ಬೆರೆಸುವ ಮೂಲಕ ನೆಲದಲ್ಲಿ ಸಾವಯವ ಅಂಶವನ್ನು ಹೆಚ್ಚಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರಪ್ಪ ಹೇಳಿದರು.ತಾಲೂಕಿನ ಎಳೆಹೊಳೆ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ನಡೆದ 2024-25ನೇ ಸಾಲಿನ ಕರ್ನಾಟಕ ಸಮೃದ್ಧಿ ಯೋಜನೆಯಡಿ ರೈತರಿಗೆ ಮಣ್ಣಿನ ಫಲವತ್ತತೆ ಬಗ್ಗೆ ಅರಿವು ಮೂಡಿಸುವ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸಿರು ಎಲೆಗಳ ಗೊಬ್ಬರಗಳಿಂದ ಮಣ್ಣಿನ ಆರೋಗ್ಯ ಕಾಪಾಡಿ ಉತ್ತಮ ಬೆಳೆ ಬೆಳೆಯಬಹುದು. ರಸಗೊಬ್ಬರ ಬಳಸುವ ಪ್ರಮಾಣ ಕಡಿಮೆ ಮಾಡಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಹಾಯಕ ಕೃಷಿ ನಿರ್ದೇಶಕ ಎ. ನಾರನಗೌಡ ಮಾತನಾಡಿ, ಕರ್ನಾಟಕ ಸಮೃದ್ಧಿ ಯೋಜನೆಯಡಿ ರೈತರು, ತಮ್ಮ ಜಮೀನಿನ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಆ ಮೂಲಕ ಮಣ್ಣಿನ ಫಲವತ್ತತೆ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಸಬೇಕು ಎಂದರು.
ಉಪ ಕೃಷಿ ನಿರ್ದೇಶಕ ಅಶೋಕ ಮಾತನಾಡಿ, ರೈತರು ಏಕಬೆಳೆ ಪದ್ಧತಿ ಕೈಬಿಟ್ಟು ಸಮಗ್ರ ಕೃಷಿ ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು. ತಾಂತ್ರಿಕ ವಿಷಯಗಳಿಗಾಗಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವಂತೆಯೂ ತಿಳಿಸಿದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾದೇವಮ್ಮ ಅಧ್ಯಕ್ಷತೆ ವಹಿಸಿದ್ದರು. ಮಲೇಬೆನ್ನೂರು ಕೃಷಿ ಅಧಿಕಾರಿ, ಎಚ್.ಆರ್. ಇನಾಯತ್, ಎಂ.ವಿ. ರಾಕೇಶ್, ಕೃಷಿ ಸಖಿ ನಾಗಮ್ಮ, ಎಳೆಹೊಳೆ ಗ್ರಾಮದ ಪ್ರಗತಿಪರ ರೈತರು ಹಾಗೂ ಸ್ವಸಹಾಯದ ಸಂಘದ ಸದಸ್ಯರು ಭಾಗವಹಿಸಿದ್ದರು.
- - - -18ಎಚ್‍ಆರ್‍ಆರ್01:ಹರಿಹರ ತಾಲೂಕಿನ ಎಳೆಹೊಳೆ ಗ್ರಾಮದಲ್ಲಿ ನಡೆದ ರೈತರಿಗೆ ಮಣ್ಣಿನ ಫಲವತ್ತತೆ ಅರಿವು ತರಬೇತಿ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ ಉದ್ಘಾಟಿಸಿದರು.