ಮಾಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕಕ್ಕೆ ನೀಡಬೇಕಾದ ಜಿಎಸ್‌ಟಿ ಹಣ ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದು, ನರೇಂದ್ರ ಮೋದಿ ಅಭಿವೃದ್ಧಿ ಮೂಲಕವೇ ಹಣ ಹಿಂತಿರುಗಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 11ನೇ ವರ್ಷದ ಸಾಧನೆ ಬಗ್ಗೆ ಮಾತನಾಡಿದ ಅವರು, ನೂರು ರುಪಾಯಿ ತೆರಿಗೆ ಕಟ್ಟಿದರೆ ಕರ್ನಾಟಕಕ್ಕೆ ಕೇವಲ 13 ರು. ಮಾತ್ರ ಕೇಂದ್ರ ಸರ್ಕಾರದಿಂದ ತೆರಿಗೆ ಹಣ ಬರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸುತ್ತಾರೆ. ನರೇಂದ್ರ ಮೋದಿ ಕರ್ನಾಟಕಕ್ಕೆ ಇಲ್ಲಿಯವರೆಗೂ ಐದು ಲಕ್ಷ ಕೋಟಿ ಅನುದಾನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಿ ಲಕ್ಷಾಂತರ ಜನಗಳಿಗೆ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಇದು ತೆರಿಗೆ ಹಣ ಅಭಿವೃದ್ಧಿಗೆ ಬರುತ್ತಿರುವುದು ಕರ್ನಾಟಕ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲವೇ? 2014 ರಿಂದ 2025ರವರೆಗೆ 11 ವರ್ಷದಲ್ಲಿ ಕರ್ನಾಟಕದಲ್ಲಿ ಕೇಂದ್ರ ಯೋಜನೆಗಳಿಂದ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ನೋಡಲಿ, ಕಾರಿಡಾರ್ ರಸ್ತೆ ದೊಡ್ಡ ದೊಡ್ಡ ಕೈಗಾರಿಕೆಗಳು ಏರ್‌ಪೋರ್ಟ್ ಅಭಿವೃದ್ಧಿಗೆ ನೇರವಾಗಿ ಹಣ ಪಾವತಿಯಾಗುತ್ತಿದೆ. ಹೀಗೆ ಅಭಿವೃದ್ಧಿ ವಿಚಾರವಾಗಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅನುದಾನ ಬರುತ್ತಿದ್ದು ಇದನ್ನು ತಿಳಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದು ಕೇಂದ್ರ ಸರ್ಕಾರ ಕಳೆದ 11 ವರ್ಷಗಳಿಂದ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿದೆ. ವಲ್ಡ್ ಬ್ಯಾಂಕ್ ನವರೇ ಭಾರತ ಆರ್ಥಿಕ ಸ್ಥಿತಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಘೋಷಣೆ ಮಾಡಿರುವುದು ಮೋದಿ ಸರ್ಕಾರದ ಸಾಧನೆಯನ್ನು ತಿಳಿಸುತ್ತದೆ ಎಂದು ಹೇಳಿದರು.ಮೋದಿಯಿಂದಲೇ ಗುದ್ದಲಿ ಪೂಜೆ: ಸಾವಿರಾರು ಕೋಟಿ ಅನುದಾನದ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೆ ಗುದ್ದಲಿಪೂಜೆ ಮಾಡಿ ಅವರ ಕೈಯಿಂದಲೇ ಉದ್ಘಾಟನೆ ಆಗಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಹೇಳಬಹುದು. ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಕಾಡಿಡಾರ್ ದಶಪಥ ರಸ್ತೆ ಇದಕ್ಕೆ ಮಾದರಿಯಾಗಿದ್ದು, ಕರ್ನಾಟಕದಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆ ಸ್ಥಾಪಿಸಿ ಹಲವು ಮಂದಿಗೆ ಉದ್ಯೋಗಾವಕಾಶ ನೀಡಿದ್ದಾರೆ. ಹೀಗೆ ಮೋದಿ ಸರ್ಕಾರ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದು ಹಲವು ಮಹತ್ವಕರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿರುವುದು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟಿರುವುದು, ಹೀಗೆ ಮೋದಿ ಅವರ ಸಾಧನೆ ಮುಂದುವರಿಯುತ್ತಿದೆ. 11 ವರ್ಷದ ಸಾಧನೆಯ ವರದಿ ಮುಂದೆ ಬಿಡುಗಡೆಯಾಗಿದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದರು.
ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು, ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಘವೇಂದ್ರ, ತಾಲ್ಲೂಕು ಅಧ್ಯಕ್ಷ ವೀರಭದ್ರಯ್ಯ, ಮುಖಂಡರಾದ ಮಾರಪ್ಪ, ಜಯಮಯ್ಯ, ಹನಮಂತೇಗೌಡ, ಶಿವಕುಮಾರ್, ಹೊಸಪೇಟೆ ಅಂಜು, ಕಿರಣ್ ಕುಮಾರ್ ಸಿರಿದಂತಿ ಇತರರು ಭಾಗವಹಿಸಿದ್ದರು.