ಕೆಲವು ಡೈರಿಗಳಲ್ಲಿ ರೈತರಿಗೆ ಹಾಲಿನ ತೂಕದಲ್ಲಿ ವಂಚಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ರಾಜಕೀಯ ಹಸ್ತಕ್ಷೇಪದಿಂದ ಡೈರಿಗಳು ಪಕ್ಷ ರಾಜಕಾರಣದ ಹಿಡಿತಕ್ಕೆ ಸಿಲುಕಿ ನಲುಗುತ್ತಿವೆ. ಗುಣಮಟ್ಟದ ಹಾಲು ಪೂರೈಕೆ ಮಾಡಿದರೂ ರೈತರಿಗೆ ಅದರ ಲಾಭ ಸಿಗುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತಮ್ಮ ವೈಯಕ್ತಿಕ ರಾಜಕಾರಣಕ್ಕೆ ಬಳಕೆ ಮಾಡಿಕೊಂಡು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮತ್ತು ಮನ್ಮುಲ್ ನಿರ್ದೇಶಕ ಡಾಲು ರವಿ ಪರಸ್ಪರ ನಿಂದನೆಯಲ್ಲಿ ತೊಡಗಿಸಿಕೊಂಡಿರುವುದನ್ನು ತಾಲೂಕು ರೈತಸಂಘ ಖಂಡಿಸಿದೆ.
ಪಟ್ಟಣದ ರೈತಸಂಘದ ಕಾರ್ಯಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣ, ಹಾಲು ನೀರಿನ ಪ್ರಕರಣ ಸೇರಿದಂತೆ ಹಲವು ಹಗರಣಗಳು ಬೆಳಕಿಗೆ ಬಂದಿವೆ. ರೈತರ ಫಲವನ್ನು ಮನ್ಮುಲ್ ಆಡಳಿತಗಾರರು ದೋಚುತ್ತಿದ್ದಾರೆ ಎಂದು ದೂರಿದರು.
ಮನ್ಮುಲ್ ಹಗರಣದ ಬಗ್ಗೆ ಒಗ್ಗೂಡಿ ಹೋರಾಡಬೇಕಾದ ಕ್ಷೇತ್ರದ ಶಾಸಕರು ಮತ್ತು ಮನ್ಮುಲ್ ನಿರ್ದೇಶಕರು ಇಬ್ಬರು ತಮ್ಮ ಕಾರ್ಯ ಕ್ಷೇತ್ರವನ್ನು ಮರೆತು ವೈಯಕ್ತಿಕ ನಿಂದನೆಯಲ್ಲಿ ತೊಡಗಿ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.
ಹೈನುಗಾರಿಕೆ ನಂಬಿ ತಾಲೂಕಿನ ಸಾವಿರಾರು ರೈತ ಕುಟುಂಬಗಳು ಬದುಕುತ್ತಿವೆ. ರಾಜ್ಯದಲ್ಲಿ ತೀವ್ರ ಬರಗಾಲದಿಂದ ರಾಸುಗಳಿಗೆ ಮೇವಿನ ಸಮಸ್ಯೆಯಿದೆ. ಹಾಲು ಉತ್ಪಾದಕರಿಗೆ ಸಿಗಬೇಕಾದ ನ್ಯಾಯಯುತ ಬೆಲೆ ಮನ್ಮುಲ್ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಕೆಲವು ಡೈರಿಗಳಲ್ಲಿ ರೈತರಿಗೆ ಹಾಲಿನ ತೂಕದಲ್ಲಿ ವಂಚಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ರಾಜಕೀಯ ಹಸ್ತಕ್ಷೇಪದಿಂದ ಡೈರಿಗಳು ಪಕ್ಷ ರಾಜಕಾರಣದ ಹಿಡಿತಕ್ಕೆ ಸಿಲುಕಿ ನಲುಗುತ್ತಿವೆ. ಗುಣಮಟ್ಟದ ಹಾಲು ಪೂರೈಕೆ ಮಾಡಿದರೂ ರೈತರಿಗೆ ಅದರ ಲಾಭ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ರಾಜಕಾರಣ ಕಲುಷಿತಗೊಳ್ಳುತ್ತಿದೆಯಲ್ಲದೆ ಹಾಲು ಉತ್ಪಾದಕ ರೈತರು ತಲೆತಗ್ಗಿಸಬೇಕಾದ ಸ್ಥಿತಿ ಬಂದಿದೆ. ಸಹಕಾರ ಸಂಘಗಳನ್ನು ತಮ್ಮ ರಾಜಕಾರಣಕ್ಕೆ ಬಳಕೆ ಮಾಡುವುದನ್ನು ರೈತಸಂಘ ಖಂಡಿಸುತ್ತಿದೆ.
ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ವಂಚನೆ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಬೆಳೆದ ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ತೂಕ ಮತ್ತು ಇಳುವರಿಯಲ್ಲಿ ರೈತರಿಗೆ ವಂಚನೆಯಾಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಸಕ್ಕರೆ ಕಾರ್ಖಾನೆ ಬಳಿ ಎ.ಪಿ.ಎಂ.ಸಿ ಮೂಲಕ ಒಂದೊಂದು ತೂಕದ ಯಂತ್ರವನ್ನು ಅಳವಡಿಸಿ ಕಾರ್ಖಾನೆಯವರ ತೂಕದ ವಂಚನೆ ನಿಯಂತ್ರಿಸಲು ಗಂಭೀರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ ಕಾರ್ಖಾನೆ ಬಳಿ ಸರ್ಕಾರದ ವತಿಯಿಂದ ತೂಕದ ಯಂತ್ರ ಅಳವಡಿಸಿರುವ ಬಗ್ಗೆ ಈ ಹಿಂದೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅಶ್ವಾಸನೆ ನೀಡಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಗಳು ಸಕ್ಕರೆ ಕಾರ್ಖಾನೆ ಮಾಲೀಕರ ಹಿಡಿತದಲ್ಲಿರುವುದರಿಂದ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕುತ್ತಿಲ್ಲ. ಪಕ್ಕದ ತಮಿಳು ನಾಡಿನಲ್ಲಿ ರೈತರಿಗೆ ಪ್ರತಿಟನ್ ಕಬ್ಬಿಗೆ 5900 ರು. ಅನುಕೂಲವಾಗುವಂತೆ ಕಬ್ಬಿನ ಬೆಲೆ ನಿಗಧಿ ಪಡಿಸಿದ್ದಾರೆ. ಇಲ್ಲಿಯೂ ಟನ್ ಕಬ್ಬಿಗೆ ಕನಿಷ್ಠ ಬೆಲೆ ನಿಗದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಚೌಡೇನಹಳ್ಳಿ ಕೃಷ್ಣೇಗೌಡ ಮತ್ತು ಹಕ್ಕಿಮಂಚನಹಳ್ಳಿ ಹೊನ್ನೇಗೌಡ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.