ಕೇಂದ್ರದಿಂದ ರಾಜಕೀಯ ಉದ್ದೇಶಕ್ಕಾಗಿ ತನಿಖಾ ಸಂಸ್ಥೆಗಳ ಬಳಕೆ: ಶಾಸಕ ಶಿವರಾಮ್ ಹೆಬ್ಬಾರ್

KannadaprabhaNewsNetwork |  
Published : Sep 29, 2026, 02:15 AM IST
ಶಿವರಾಮ್ ಹೆಬ್ಬಾರ್ | Kannada Prabha

ಸಾರಾಂಶ

ಕಾಂಗ್ರೆಸ್ ನಾಯಕರ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಬ್ಬಾಳಿಕೆ ನಡೆಸಲಾಗುತ್ತಿದೆ. ಸತೀಶ್ ಸೈಲ್, ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ ನಾಯಕರು, ಸಚಿವರು ಹಾಗೂ ಶಾಸಕರ ಮೇಲೆ ದಾಳಿ ಮತ್ತು ತನಿಖೆಗಳು ನಡೆಯುತ್ತಿವೆ ಎಂದು ಶಿವರಾಮ ಹೆಬ್ಬಾರ್ ತಿಳಿಸಿದರು.

ಕಾರವಾರ: ಸಿಬಿಐ, ಇಡಿ ಹಾಗೂ ಚುನಾವಣಾ ಆಯೋಗ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಉಚ್ಚಾಟಿತ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಆರೋಪಿಸಿದ್ದಾರೆ.ಕಾರವಾರದಲ್ಲಿ ಸೋಮವಾರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿ, ಟುಡೇ ಐಯಾಮ್ ಎ ಫ್ರೀ ಬರ್ಡ್, ನಮ್ಮನ್ನು ಒಂದು ಪಕ್ಷದಿಂದ ಉಚ್ಚಾಟಿಸಿದ ಬಳಿಕ, ಯಾವ ಸಂದರ್ಭದಲ್ಲಿ ನಮಗೆ ಯಾವುದು ಸರಿ ಎನ್ನಿಸುತ್ತದೆ ಅದನ್ನು ನಿರ್ಣಯಿಸುವ ಅಧಿಕಾರ ಜನ ನನಗೆ ಕೊಟ್ಟಿದ್ದಾರೆ. ಚುನಾವಣಾ ಆಯೋಗ ನಡೆದುಕೊಂಡ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದ್ದು, ಆ ಕಾರಣಕ್ಕೆ ಹೋರಾಟದಲ್ಲಿ ಪಾಲ್ಗೊಂಡಿದ್ದಾಗಿ ತಿಳಿಸಿದರು.ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ನಾಯಕರ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಬ್ಬಾಳಿಕೆ ನಡೆಸಲಾಗುತ್ತಿದೆ. ಸತೀಶ್ ಸೈಲ್, ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ ನಾಯಕರು, ಸಚಿವರು ಹಾಗೂ ಶಾಸಕರ ಮೇಲೆ ದಾಳಿ ಮತ್ತು ತನಿಖೆಗಳು ನಡೆಯುತ್ತಿವೆ. ಬಿಜೆಪಿಗೆ ಸೇರ್ಪಡೆಯಾದ ಬಳಿಕ ಆರೋಪಗಳಿಂದ ಮುಕ್ತರಾಗುತ್ತಾರೆ ಎಂಬ ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ವ್ಯಂಗ್ಯವಾಡಿದ ಹೆಬ್ಬಾರ್, ಯಾರೆಲ್ಲ ಬಿಜೆಪಿಗೆ ಹೋಗುತ್ತಾರೋ ಅವರನ್ನು ವಾಷಿಂಗ್ ಮಿಷನ್‌ನಲ್ಲಿ ಹಾಕಿದರೆ ಎಲ್ಲವೂ ಕ್ಲೀನ್ ಆಗುತ್ತದೆ. ಹಿಂದೆ ನನ್ನನ್ನೂ ಹೀಗೆ ವಾಷಿಂಗ್ ಮಿಷನ್‌ಗೆ ಹಾಕಿದ್ದರು ಎಂದು ಟೀಕಿಸಿದರು.ಚುನಾವಣಾ ಆಯುಕ್ತರ ನೇಮಕಾತಿ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೆಬ್ಬಾರ್, ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಮುಖ್ಯ ನ್ಯಾಯಮೂರ್ತಿಯವರನ್ನು ಒಳಗೊಂಡ ಸಮಿತಿಯ ವ್ಯವಸ್ಥೆ ಇರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ವ್ಯವಸ್ಥೆಯಲ್ಲಿ ನ್ಯಾಯಾಂಗದ ಪ್ರತಿನಿಧಿತ್ವ ಇರಬೇಕೆಂದು ಒತ್ತಾಯಿಸಿದ ಅವರು, ಮುಖ್ಯ ನ್ಯಾಯಮೂರ್ತಿಯವರನ್ನು ಆಯ್ಕೆ ಸಮಿತಿಯಲ್ಲಿ ಮತ್ತೆ ಸೇರಿಸುವ ಮೂಲಕ ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸರ್ಕಾರಿ ನೌಕರರು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, ದೇವರು ರೈತರಿಗಿಂತ ನಿಮ್ಮನ್ನು ಸುಖದಲ್ಲಿ ಇಟ್ಟಿದ್ದಾನೆ. ಆದ್ದರಿಂದ ವೇತನ ಹೆಚ್ಚಳಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷ ರಜೆ ನೀಡಿ, ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ನಾಡಿನ ರೈತರ ಬಗ್ಗೆ ಮಾನವೀಯತೆಯಿಂದ ಯೋಚಿಸಿ ಎಂದು ನೌಕರರಿಗೆ ಕಳಕಳಿಯ ಮನವಿ ಮಾಡಿದರು.ಕಸ್ತೂರಿರಂಗನ್ ವರದಿ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಹೆಬ್ಬಾರ್ ಆಗ್ರಹಿಸಿದ್ದು, ರಾಜ್ಯ ಸರ್ಕಾರ ಈ ವರದಿಯನ್ನು ಹಲವು ಬಾರಿ ವಿರೋಧಿಸಿದೆ. ಜಿಲ್ಲೆಯ ಸಂಸದರು ಖಾಲಿ ಡಬ್ಬಿ ಮತ್ತು ಚೊಂಬು ಹಿಡಿದು ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವುದಕ್ಕಿಂತ ದೆಹಲಿಯ ಸಂಸತ್ತಿನಲ್ಲಿ ಜಿಲ್ಲೆಯ ಜನರ ಪರ ಧ್ವನಿ ಎತ್ತಬೇಕು ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾದ ಜೀವನಶೈಲಿ ಅನಾರೋಗ್ಯಕ್ಕೆ ಕಾರಣ: ಡಾ. ಹಿರೇಮಠ
ರಾಷ್ಟ್ರೀಯ ಏಕತೆ ಬೆಸೆಯುವ ಭಾಷೆ ಹಿಂದಿ: ಡಾ. ಹುಸೇನಸಾಬ