ಚುನಾವಣಾ ಕೆಲಸಕ್ಕೆ ಖಾಸಗಿ ಶಾಲಾ ವಾಹನಗಳ ಬಳಕೆ

KannadaprabhaNewsNetwork |  
Published : Apr 13, 2024, 01:45 AM ISTUpdated : Apr 13, 2024, 08:00 AM IST
ಬಸ್‌ | Kannada Prabha

ಸಾರಾಂಶ

ಚುನಾವಣಾ ವೆಚ್ಚ ತಗ್ಗಿಸಲು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಆಯೋಗವು ಖಾಸಗಿ ಶಾಲೆಯ ಬಸ್‌ಗಳನ್ನು ಬಳಸಿಕೊಳ್ಳಲು ಮಾತುಕತೆ ನಡೆಸಿದೆ.

 ಬೆಂಗಳೂರು :  ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳ ಜತೆಗೆ ಖಾಸಗಿ ಶಾಲಾ ವಾಹನಗಳನ್ನು ಬಳಸಿಕೊಳ್ಳಲು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗ ಮುಂದಾಗಿದೆ.

ಮತದಾನ ಪ್ರಕ್ರಿಯೆಗೆ ಮತಗಟ್ಟೆಗಳಿಗೆ ಇವಿಎಂ ಯಂತ್ರಗಳನ್ನು ತೆಗೆದುಕೊಂಡು ಹೋಗುವ ಮತಗಟ್ಟೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಲು ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳನ್ನು ಒಪ್ಪಂದದ ಆಧಾರದಲ್ಲಿ ಪಡೆಯಲಾಗುತ್ತದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ಚುನಾವಣಾ ಕಾರ್ಯಕ್ಕಾಗಿ 5 ಸಾವಿರಕ್ಕೂ ಹೆಚ್ಚಿನ ವಾಹನಗಳ ಅವಶ್ಯಕತೆಯಿದೆ.

ಅದರೆ, ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳನ್ನು ಒಪ್ಪಂದದ ಮೇಲೆ ಪಡೆಯಲು ಹೆಚ್ಚಿನ ಮೊತ್ತ ಪಾವತಿಸಬೇಕಾದ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣಾ ಕಾರ್ಯಗಳಿಗೆ ಖಾಸಗಿ ಶಾಲಾ ವಾಹನಗಳನ್ನೂ ಬಳಸಿಕೊಳ್ಳಲು ಚುನಾವಣಾ ವಿಭಾಗ ಮುಂದಾಗಿದೆ. ಅದಕ್ಕಾಗಿ ಅಧಿಕಾರಿಗಳು ಈಗಾಗಲೇ ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಜತೆ ಸಭೆಯನ್ನೂ ನಡೆಸಿದ್ದಾರೆ.

ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳು ಒಪ್ಪಂದದ ಮೇಲೆ ಪಡೆದರೆ ದಿನಕ್ಕೆ ₹8 ಸಾವಿರದಿಂದ ₹14 ಸಾವಿರವರೆಗೆ ನೀಡಬೇಕಿದೆ. ಅದು ಚುನಾವಣಾ ವಿಭಾಗಕ್ಕೆ ಹೊರೆಯಾಗುವ ಕಾರಣದಿಂದ ಕೆಲ ಪ್ರದೇಶಗಳಿಗೆ ಖಾಸಗಿ ಶಾಲಾ ವಾಹನಗಳನ್ನು ಬಳಸಿಕೊಳ್ಳಲು ಚರ್ಚಿಸಲಾಗಿದೆ.

ಅಗತ್ಯವಿರುವ 5 ಸಾವಿರ ಬಸ್‌ಗಳ ಪೈಕಿ ಕನಿಷ್ಠ 600ರಿಂದ 1 ಸಾವಿರ ಬಸ್‌ಗಳನ್ನು ಖಾಸಗಿ ಶಾಲೆಗಳಿಂದ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅದರಲ್ಲೂ, ಯಾವುದೇ ರಾಜಕೀಯ ವ್ಯಕ್ತಿಗಳ ಸಂಪರ್ಕವಿಲ್ಲದ ಶಾಲೆಗಳನ್ನು ಗುರುತಿಸಿ ಆ ಶಾಲೆಗಳಿಂದ ವಾಹನ ಪಡೆಯಲು ನಿರ್ಧರಿಸಲಾಗಿದೆ. ಹೀಗೆ ಪಡೆಯಲಾಗುವ ಶಾಲಾ ವಾಹನಗಳಿಗೆ ಯಾವುದೇ ರೀತಿಯ ಬಾಡಿಗೆ ನೀಡದೆ ಡೀಸೆಲ್‌ ಭರ್ತಿ ಮಾಡಿ, ಚಾಲಕರಿಗೆ ಆ ದಿನದ ವೇತನ ನೀಡುವಂತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ