ಜನರ ತೆರಿಗೆ ಹಣ ಸಮರ್ಪಕವಾಗಿ ಬಳಸಿ: ಡಾ.ಸಿ. ನಾರಾಯಣಸ್ವಾಮಿ

KannadaprabhaNewsNetwork | Published : Jun 29, 2024 12:37 AM

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರಾಂಗಿದೆ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಆದಾಯ ಕ್ರೋಡಿ ಕರಿಸಿ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ನಗರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ. ನಾರಾಯಣಸ್ವಾಮಿ ಹೇಳಿದರು.

ಚಿಕ್ಕಮಗಳೂರು ನಗರಸಭೆಯಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರಾಂಗಿದೆ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಆದಾಯ ಕ್ರೋಡಿ ಕರಿಸಿ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ನಗರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ. ನಾರಾಯಣಸ್ವಾಮಿ ಹೇಳಿದರು.

ನಗರಸಭೆಯಲ್ಲಿ ನಡೆದ ಐದನೇ ರಾಜ್ಯ ಹಣಕಾಸು ಆಯೋಗದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಮುಳ್ಳಯ್ಯನಗಿರಿ ಪ್ರದೇಶಕ್ಕೆ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ವೈಶಿಷ್ಟ್ಯತೆಯ ಪ್ರಕೃತಿ ಸೌಂದರ್ಯವನ್ನು ಆಧಾರವಾಗಿಟ್ಟುಕೊಂಡು ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದರು.

ನಗರಸಭೆ ಪೌರಾಯುಕ್ತ ಬಸವರಾಜ್ ನಗರದ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಿ, ನಗರದಲ್ಲಿ ಒಟ್ಟು 35 ವಾರ್ಡ್ ಗಳಿದ್ದು ಪ್ರತಿ ವಾರ್ಡ್‌ಗೂ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಎರಡು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ, ಪ್ರತಿನಿತ್ಯ ನೀರು ಹರಿಸಲು ಜಾಕ್ವೆಲ್ ಸಮಸ್ಯೆ ಇದ್ದು ಇದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರತಿದಿನ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಗರದ 14 ಕೊಳಚೆ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆ. ತೆರಿಗೆ ವಸೂಲಾತಿಗೆ ಬಿಲ್ ಕಲೆಕ್ಟರ್ ಸಿಬ್ಬಂದಿ ಕೊರತೆ ಇದ್ದು ಖಾಲಿರುವ ಹುದ್ದೆ ಗಳಿಗೆ ಸಿಬ್ಬಂದಿ ನೇಮಿಸಿಕೊಂಡಲ್ಲಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸಿ ತೆರಿಗೆಯನ್ನು ನಿರ್ಧಿಷ್ಟ ಸಮಯದಲ್ಲಿ ಕ್ರೋಡಿಕರಿಸಬಹುದು ಎಂದರು.ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ನಗರಸಭೆಯಲ್ಲಿ ಆದಾಯ ಕ್ರೋಡಿಕರಣಕ್ಕೆ ಅನೇಕ ಮೂಲಗಳನ್ನು ನಿರ್ಮಿಸಿಕೊಳ್ಳಲಾಗಿದೆ, ಮಳಿಗೆಗಳು, ನೀರಿನ ತೆರಿಗೆ, ಜಾಹೀರಾತು, ಉದ್ದಿಮೆ ಪರವಾನಗಿ ಸೇರಿದಂತೆ ಅನೇಕ ಮೂಲಗಳಿಂದ ತೆರಿಗೆ ಹಣ ಕ್ರೋಡಿಕರಿಸಲಾಗುತ್ತಿದೆ. ವಾರ್ಡ್‌ಗಳ ಸ್ವಚ್ಛತೆ ಹಾಗೂ ವಿವಿಧ ಕಾರ್ಯಗಳಿಗೆ ಪೌರ ಕಾರ್ಮಿಕರ ಕೊರತೆ ಇದ್ದು ಪೌರ ಕಾರ್ಮಿಕರ ನೇಮಕವಾದಲ್ಲಿ ನಗರ ಇನ್ನಷ್ಟು ಸ್ವಚ್ಛವಾಗಲಿದೆ ಎಂದು ಹೇಳಿದರು.ಸಭೆಯಲ್ಲಿ ಐದನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್ ಫೊಂಡೆ, ಮಹಮ್ಮದ್ ಸನಾಉಲ್ಲಾ ಹಾಗೂ ಸಮಲೋಚಕ ಎಂ.ಕೆ. ಕೆಂಪೇಗೌಡ, ನಗರಸಭಾ ಯೋಜನ ನಿರ್ದೇಶಕಿ ಚಂದ್ರಮ್ಮ, ನಗರಸಭಾ ಉಪಾಧ್ಯಕ್ಷ ಚನ್ನಕೇಶವ ಹಾಗೂ ಸದಸ್ಯರು ಹಾಜರಿದ್ದರು. 28 ಕೆಸಿಕೆಎಂ 3ಚಿಕ್ಕಮಗಳೂರು ನಗರಸಭೆಯಲ್ಲಿ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಆರ್‌.ಎಸ್‌. ಫೋಡೆ, ಮಹಮ್ಮದ್‌ ಸನಾಉಲ್ಲಾ, ಬಸವರಾಜ್‌ ಇದ್ದರು.

Share this article