ಸೌರಶಕ್ತಿ ಕೃಷಿ ಯಂತ್ರೋಪಕರಣ ಬಳಸಿ

KannadaprabhaNewsNetwork |  
Published : Jun 27, 2025, 12:48 AM IST
 26ಕೆಕೆಆರ್1:ಕೊಪ್ಪಳ ಬಳಿಯ  ಭಾಗ್ಯನಗರ ರಸ್ತೆಯ ಕಠಾರೆ ಕಲ್ಯಾಣ ಮಂಟಪದಲ್ಲಿ  ಜಿಲ್ಲಾಡಳಿಡ, ಜಿಪಂ, ಕೃಷಿ ಇಲಾಖೆ ಹಾಗೂ ಸೆಲ್ಕೋ ಫೌಂಡೇಶನ್ ವತಿಯಿಂದ ಜರುಗಿದ ``ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವ'' ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸುರೇಶ ಬಿ ಇಟ್ನಾಳ ಉದ್ಘಾಟಿಸಿದರು.  | Kannada Prabha

ಸಾರಾಂಶ

ಹಿಂದುಳಿದ ಪ್ರದೇಶವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಜನರು ಕೃಷಿ ಅವಲಂಬಿತರು. ಶೇ. 75ರಷ್ಟು ಒಣ ಬೇಸಾಯ ಹಾಗೂ ಶೇ. 25ರಷ್ಟು ಮಾತ್ರ ನೀರಾವರಿ ಇದೆ. ರೈತರಿಗೆ ಉತ್ತಮ ಬೆಲೆ ಸಿಗುವಂತಾಗಬೇಕು.

ಕೊಪ್ಪಳ:

ಸೌರ ಕೃಷಿ ಮತ್ತು ಸೌರ ಉದ್ಯೋಗದಿಂದ ಜನರ ಆದಾಯ ಹೆಚ್ಚಾಗಲಿದೆ ಎಂದು ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ ಹೇಳಿದರು.

ನಗರದ ಭಾಗ್ಯನಗರ ರಸ್ತೆಯ ಕಠಾರೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿಡ, ಜಿಪಂ, ಕೃಷಿ ಇಲಾಖೆ ಹಾಗೂ ಸೆಲ್ಕೋ ಫೌಂಡೇಶನ್ ವತಿಯಿಂದ ಜರುಗಿದ ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಬಹುತೇಕ ಜನರು ಕೃಷಿ ಅವಲಂಬಿತರು. ಶೇ. 75ರಷ್ಟು ಒಣ ಬೇಸಾಯ ಹಾಗೂ ಶೇ. 25ರಷ್ಟು ಮಾತ್ರ ನೀರಾವರಿ ಇದೆ. ರೈತರಿಗೆ ಉತ್ತಮ ಬೆಲೆ ಸಿಗುವಂತಾಗಬೇಕು. ರೈತರು ತಮ್ಮ ಬೆಳೆಗಳಿಂದ ವಿವಿಧ ಬಗೆಯ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರೆ, ಅದಕ್ಕೆ ಹೆಚ್ಚಿನ ಮೌಲ್ಯ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ಕೊಡಬೇಕು. ಅಂದಾಗ ಮಾತ್ರ ರೈತರು ಬೆಳೆದ ಬೆಳೆಗಳಿಗೆ ಇನ್ನೂ ಹೆಚ್ಚಿನ ಬೆಲೆ ಸಿಗಲು ಸಾಧ್ಯವಾಗಲಿದೆ ಎಂದರು.

ರೈತರು ಸೌರ ಶಕ್ತಿಯಿಂದ ಬಳಕೆಯಾಗುವ ಕೃಷಿ ಯಂತ್ರೋಪಕರಣ ಹಾಗೂ ಇತರ ಉತ್ಪನ್ನಗಳ ಬಳಕೆ ಮಾಡಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು. ಮೇಣದ ಬತ್ತಿ ಉತ್ಪಾದನೆ, ರೊಟ್ಟಿ ತಯಾರಿಕೆ, ಶ್ಯಾವಿಗೆ, ಚಕ್ಕಲಿ, ಆಲುಗಡ್ಡೆ ಚಿಪ್ಸ್ ಹಾಗೂ ಇತರೆ ಆಹಾರ ಪದಾರ್ಥ ತಯಾರಿಸುವ ಸೌರಶಕ್ತಿಯ ಯಂತ್ರೋಪಕರಣಗಳನ್ನು ಕೃಷಿ ಮಹಿಳೆಯರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ಬಳಕೆ ಮಾಡಿಕೊಂಡರೆ ಎಲ್ಲರಿಗೂ ಜೀವನೋಪಾಯವಾಗಲಿದೆ ಎಂದು ಹೇಳಿದರು.

ಸೆಲ್ಕೋ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಹಂದೆ ಮಾತನಾಡಿ, ಸೌರ ಶಕ್ತಿ ಬಳಕೆಯಲ್ಲಿ ವಿವಿಧ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇಂದಿನ ಕೃಷಿ ಮತ್ತು ಉದ್ಯೋಗದಲ್ಲಿ ಸೌರಶಕ್ತಿಯ ಬಳಕೆ ಅತ್ಯವಶ್ಯಕ. ಜಿಲ್ಲೆಯಲ್ಲಿ ಒಂದು ವರ್ಷದೊಳಗೆ ಒಂದು ಸಾವಿರ ಸೌರ ಶಕ್ತಿ ಚಾಲಿತ ಸಿರಿಧಾನ್ಯ ಸಂಸ್ಕರಣ ಘಟಕಗಳ ಸ್ಥಾಪನೆ ಗುರಿ ಹೊಂದಲಾಗಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಸೌರ ಶಕ್ತಿ ಬಳಕೆಯಿಂದ ಕೃಷಿಗೆ ಸಂಬಂಧಿಸಿದ ಯಂತ್ರಗಳು, ಸ್ವಯಂ ಉದ್ಯೋಗಕ್ಕಾಗಿ ಬೇಕಾಗುವ ಯಂತ್ರೋಪಕರಣಗಳನ್ನು ಸಹಾಯಧನ ರೂಪದಲ್ಲಿ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ನಬಾರ್ಡ್ ಕಾರ್ಯಕ್ರಮ ಅಧಿಕಾರಿ ಮಹಾದೇವ ಕೀರ್ತಿ, ಕೃಷಿ ವಿಸ್ತರಣಾ ಕೇಂದ್ರದ ಡಾ. ಎಂ.ವಿ. ರವಿ, ಶ್ರೀನಿವಾಸ ಕುಲಕರ್ಣಿ, ಡಾ. ಎಂ.ಪಿ. ಪಾಟೀಲ್, ಪ್ರಗತಿಪರ ರೈತ ಡಾ. ದೇವೇಂದ್ರಪ್ಪ ಬಳೂಟಗಿ, ಕೃಷಿಕ ಮಹಿಳೆಯರಾದ ಮಂಗಳ, ಗೀತಾ ಸಜ್ಜನ್ ಇದ್ದರು.

ಆಕರ್ಷಿಸಿದ ಮಳಿಗೆಗಳು

ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವದಲ್ಲಿ ಕೃಷಿಗೆ ಸಂಬಂಧಿಸಿದ ಸೌರಶಕ್ತಿಯ ಯಂತ್ರಗಳಾದ ಮಿನಿ ಟ್ರ್ಯಾಕ್ಟರ್, ರೈತರ ಬೆಳೆಗಳಿಗೆ ರಾಸಾಯನಿಕ ಸಿಂಪಡಿಸುವ ಡ್ರೋನ್ ಯಂತ್ರ, ಭತ್ತದ ಮಿಲ್ಲಿಂಗ್ ಕಿರು ಯಂತ್ರ, ಎಣ್ಣೆ ಗಾಣದ ಯಂತ್ರ ಮತ್ತು ಇತರೆ ಕೃಷಿ ಯಂತ್ರೋಪಕರಣ ಹಾಗೂ ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ಶ್ಯಾವಿಗೆ, ಚಕ್ಕಲಿ, ಆಲುಗಡ್ಡೆ ಚಿಪ್ಸ್ ತಯಾರಿಕೆಯ ಸೌರ ಶಕ್ತಿಯ ಯಂತ್ರಗಳು ಹಾಗೂ ಸಿರಿಧಾನ್ಯ ಮಳಿಗೆ ಪ್ರದರ್ಶನಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.

PREV

Recommended Stories

ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ
ಕೇಂದ್ರದ ಎನ್‌ಸಿಡಿಸಿ ಬಳಕೆಗೆ ಸಿಎಂ ಮೊಂಡುತನ