ಶಿರಸಿ: ವಿದೇಶಗಳಿಗಿಂತ ಗುಣಮಟ್ಟದ ಉತ್ಪನ್ನಗಳು ನಮ್ಮಲ್ಲಿಯೇ ತಯಾರಾಗುತ್ತಿರುವಾಗ ನಾವು ವಿದೇಶಿ ವಸ್ತುಗಳನ್ನೇ ಬಳಸಿದರೆ ಇಲ್ಲಿಯ ಉತ್ಪಾದಕರಿಗೂ ಹಾನಿ, ಭಾರತದ ಆರ್ಥಿಕ ವ್ಯವಸ್ಥೆಗೂ ಉತ್ತಮವಲ್ಲ. ವಿದೇಶಿ ಉತ್ಪಾದನೆಗಿಂತ ಗುಣಮಟ್ಟದ ಉತ್ಪನ್ನಗಳು ನಮ್ಮಲ್ಲಿಯೇ ಸಿದ್ಧವಾಗುತ್ತಿದ್ದು, ಅವನ್ನೇ ಬಳಸುವ ಮೂಲಕ ಆರ್ಥಿಕತೆ ಇನ್ನಷ್ಟು ಬಲಪಡಿಸಿಕೊಳ್ಳಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಮಂಗಳವಾರ ನಗರದ ಶಿವಾಜಿಚೌಕ ಗಣೇಶ ಮಂಟಪದಲ್ಲಿ ಆತ್ಮನಿರ್ಭರ ಭಾರತಕ್ಕಾಗಿ ಸ್ವದೇಶಿ ಅಭಿಯಾನ ಚರ್ಚೆಯಲ್ಲಿ ಮಾತನಾಡಿದರು.ಸ್ವದೇಶಿ ಆಂದೋಲನ ಮಹಾತ್ಮ ಗಾಂಧೀಜಿ ಅವರಿಂದಲೇ ಆರಂಣಭಗೊಂಡಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿಯೂ ಮಹತ್ವದ ಪಾತ್ರ ನಿಭಾಯಿಸಿದೆ. ಕಾಲ ಕಾಲಕ್ಕೆ ನಾವು ವಿದೇಶಿ ವಸ್ತುಗಳ ದಾಳಿಗೆ ಬಲಿಯಾಗುತ್ತಲೇ ಇದ್ದೇವೆ. ಅನೇಕ ಬಾರಿ ನಮಗೆ ಅರಿವಿಲ್ಲದಂತೆಯೇ ವಿದೇಶಿ ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಮೆರಿಕ ನಮ್ಮ ಮೇಲೆ ತೆರಿಗೆ ದಾಳಿ ನಡೆಸಿದ್ದನ್ನು ನಾವೆಲ್ಲ ನೋಡಿದ್ದೇವೆ. ನಾವು ನಮ್ಮದೇ ಉತ್ಪನ್ನ ಬಳಸಿದರೆ ಇಂತಹ ದಾಳಿಯಿಂದ ಏನೂ ಮಾಡಲು ಸಾಧ್ಯವಿಲ್ಲ. ವಿದೇಶಿ ಉತ್ಪಾದಿತ ಇಂಧನ ಬಳಕೆಯ ಅನಿವಾರ್ಯ ಸ್ಥಿತಿ ಒಂದೆಡೆ ಇದೆ. ಆದರೆ, ಭಾರತೀಯ ಉತ್ಪನ್ನಗಳಿರುವ ವಸ್ತುಗಳನ್ನು ನಾವು ನಿರ್ಲಕ್ಷಿಸಿ ವಿದೇಶಿ ವಸ್ತುಗಳನ್ನು ಖರೀದಿಸಬಾರದು. ಸ್ವದೇಶಿ ಜನಾಂದೋಲನದ ರೀತಿಯಲ್ಲಿ ನಾವು ಈಗ ಯೋಚಿಸಲೇಬೇಕಿದೆ. ನಮ್ಮ ಸೈನ್ಯ ಇಂದು ಭಾರತೀಯ ಉತ್ಪಾದಿತ ಶಸ್ತ್ರಾಸ್ತ್ರ, ವಸ್ತುಗಳನ್ನು ಬಳಕೆ ಮಾಡುತ್ತಿದೆ. ಅದೇ ರೀತಿ ನಾವೂ ಸಹ ಭಾರತೀಯ ಉತ್ಪನ್ನಗಳನ್ನು ಬಳಸಲು ಮುಂದಾಗದಿದ್ದರೆ ನಮ್ಮ ನಿರೀಕ್ಷಿತ ಭಾರತ ಕಟ್ಟಲು ಸಾಧ್ಯವಿಲ್ಲ. ನಿರುದ್ಯೋಗ ಸಮಸ್ಯೆ ಪರಿಹಾರದ ಜೊತೆ ಭಾರತದ ಮಾನವ ಸಂಪನ್ಮೂಲಕ್ಕೂ ಆರ್ಥಿಕ ಶಕ್ತಿ ಈ ಮೂಲಕ ತುಂಬಬೇಕಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಬಿಜೆಪಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಶ್ರೀಧರ ಹಿರೆಹದ್ದ, ಗಿರೀಶ ಹೆಗಡೆ ಉಪಸ್ಥಿತರಿದ್ದರು.