ಕನ್ನಡಪ್ರಭ ವಾರ್ತೆ ರಾಯಚೂರು
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗೆ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಶೇ.100ರಷ್ಟು ಬಳಕೆಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ಜಿಪಂ ಕಚೇರಿ ಆವರಣದಲ್ಲಿರುವ ಜಲಶಕ್ತಿ ನಿರ್ಮಲ ಸಭಾಂಗಣದಲ್ಲಿ ಎಸ್‌ಸಿಪಿ- ಟಿಎಸ್‌ಪಿ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.
ಪರಿಶಿಷ್ಟರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಅವರ ಪ್ರಮಾಣಕ್ಕನುಸಾರವಾಗಿ ಸರ್ಕಾರವು ಆಯವ್ಯಯದಲ್ಲಿ ವಿಶೇಷ ಅನುದಾನ ಮೀಸಲಿಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಅವರಿಗಾಗಿಯೇ ಪೂರ್ಣ ಪ್ರಮಾಣದಲ್ಲಿ ವ್ಯಯಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ವೈಯಕ್ತಿಕ ಅಭಿವೃದ್ಧಿಗಾಗಿ ಅನುಷ್ಠಾನ ಮಾಡುವ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತದೆ. ಅವರನ್ನು ಮುನ್ನಲೆಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗಿ ಸೌಲಭ್ಯ ವಿತರಿಸಿ ಅನುದಾನ ವೆಚ್ಚ ಮಾಡಬೇಕು ಎಂದು ತಿಳಿಸಿದರು.ಅಧಿಕಾರಿಗಳು ತಮ್ಮ ಇಲಾಖೆಗಳಿಂದ ನೀಡುವ ವಿವಿಧ ಸೌಲಭ್ಯ ಹಾಗೂ ಉಪಕರಣಗಳ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ವಿವಿಧ ಯೋಜನೆಗಳಡಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಪಾಲಿಸಬೇಕು. ಫಲಾನುಭವಿಗಳು ತಮಗೆ ನೀಡಿರುವ ಉಪಕರಣ ಹಾಗೂ ಸೌಲಭ್ಯಗಳನ್ನು ಸ್ವತ: ಉಪಯೋಗಿಸಿಕೊಂಡಿರುವ ಬಗ್ಗೆ ಇಲಾಖಾಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ವೇಳೆ ವಿವಿಧ ಇಲಾಖಾವಾರು ನೀಡುವ ಸೌಲಭ್ಯಗಳು ಮತ್ತು ಉಪಕರಣಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಿದಾನಂದ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಾಳಪ್ಪ ಬಡಿಗೇರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಕೃಷ್ಣ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ ಕೋಲಕಾರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಶರಣಮ್ಮ, ಕಾರ್ಮಿಕ ಅಧಿಕಾರಿ ಅರತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.