₹100 ಕೋಟಿ ಅನುದಾನ ಶಿಕ್ಷಣ, ಆರೋಗ್ಯಕ್ಕೆ ಬಳಸಿ

KannadaprabhaNewsNetwork |  
Published : Sep 01, 2026, 02:30 AM IST
29ಕೆಡಿವಿಜಿ11-ದಾವಣಗೆರೆ ದಕ್ಷಿಣದ ಪರಾಜಿತ ಅಭ್ಯರ್ಥಿ, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾದ ₹100 ಕೋಟಿ ಅನುದಾನದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಅಫ್ಸರ್ ಕೊಡ್ಲಿಪೇಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ, ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಶಾಮನೂರು ಅವರಿಗೆ ಒತ್ತಾಯಿಸಿದ್ದಾರೆ.

- ಜಿಲ್ಲಾ ಸಚಿವ ಎಸ್ಸೆಸ್ಸೆಂ, ದಕ್ಷಿಣ ಕ್ಷೇತ್ರ ಶಾಸಕ ಸಮರ್ಥಗೆ ಎಸ್‌ಡಿಪಿಐ ಮುಖಂಡ ಅಪ್ಸರ್‌ ಕೊಡ್ಲಿಪೇಟೆ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾದ ₹100 ಕೋಟಿ ಅನುದಾನದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಅಫ್ಸರ್ ಕೊಡ್ಲಿಪೇಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ, ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಶಾಮನೂರು ಅವರಿಗೆ ಒತ್ತಾಯಿಸಿದ್ದಾರೆ.

ಸರ್ಕಾರದಿಂದ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ₹100 ಕೋಟಿ ಬಿಡುಗಡೆಯಾಗಿದೆ. ಕ್ಷೇತ್ರದ ಜನತೆಗೆ ಹರ್ಷದ ಸಂಗತಿಯಾಗಿದೆ. ಅಲ್ಲದೇ, ಕ್ಷೇತ್ರದ ಅಭಿವೃದ್ಧಿಗೆ ಇದೊಂದು ಐತಿಹಾಸಿಕ ಅವಕಾಶವಾಗಿದೆ. ಇಂತಹ ಅನುದಾನವನ್ನು ಕೇವಲ ಸಾಮಾನ್ಯ ಅಭಿವೃದ್ಧಿ ಕಾಮಗಾರಿಗೆ ಸೀಮಿತಗೊಳಿಸದೇ, ಕ್ಷೇತ್ರದ ಜನರ ದೀರ್ಘಕಾಲಿನ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪಾರದರ್ಶಕ, ಸಮಗ್ರ ಹಾಗೂ ಜನಪರ ಕ್ರಿಯಾ ಯೋಜನೆಯ ಮೂಲಕ ಸಮರ್ಪಕವಾಗಿ ಬಳಸಬೇಕು. ಕ್ಷೇತ್ರದಲ್ಲಿ ಬಡ, ಮಧ್ಯಮ ವರ್ಗ, ಗ್ರಾಮೀಣ ಜನರಿಗೆ ಕೈಗೆಟುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಆಧುನಿಕ ಮಲ್ಟಿ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಯ ಅಗತ್ಯ ತುರ್ತಾಗಿದೆ. ಆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ, ಐಸಿಯು, ಶಸ್ತ್ರಚಿಕಿತ್ಸಾ ಸೌಲಭ್ಯ, ಡಯಾಲಿಸಿಸ್, ಹೃದಯ ಚಿಕಿತ್ಸಾ ವಿಭಾಗ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಸೇವೆ ಸೇರಿದಂತೆ ಅಗತ್ಯವಾದ ಎಲ್ಲಾ ವಿಶೇಷ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಳಂಬ ಅಥವಾ ಸೂಕ್ತ ಯೋಜನೆ ಕೊರತೆಯಿಂದ ಅನುದಾನ ಬಳಕೆಯಾಗದೇ ಉಳಿಯುವ ಅಥವಾ ವಾಪಸ್‌ ಹೋಗುವ ಪರಿಸ್ಥಿತಿ ನಿರ್ಮಾಣ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಿ. ಶಾಸಕರು, ಜಿಲ್ಲಾ ಸಚಿವರು ಸಂಬಂಧಿಸಿದ ಅಧಿಕಾರಿಗಳು, ತಜ್ಞರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಡನೆ ಸಮಾಲೋಚಿಸಿ, ದೃಢ, ಪಾರದರ್ಶಕ, ಕಾಲಮಿತಿಯೊಳಗೆ ಅನುಷ್ಠಾನಗೊಳ್ಳುವ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಮನವಿ ಮಾಡಿದ್ದಾರೆ.

ಅಭಿವೃದ್ಧಿ ಎಂದರೆ ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಲ್ಲ. ಉತ್ತಮ ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ ಹಾಗೂ ಜನರ ಉತ್ತಮ ಭವಿಷ್ಯವೇ ನಿಜವಾದ ಅಭಿವೃದ್ಧಿಯಾಗಿದೆ. ₹100 ಕೋಟಿ ಅನುದಾನ ದಾವಣಗೆರೆ ದಕ್ಷಿಣ ಕ್ಷೇತ್ರದ ಭವಿಷ್ಯಕ್ಕೆ ಹೂಡಿಕೆಯಾಗಲಿ. ಕ್ಷೇತ್ರದ ಜನರ ಜೀವನದಲ್ಲಿ ಶಾಶ್ವತ ಹಾಗೂ ಅರ್ಥಪೂರ್ಣ ಬದಲಾವಣೆ ತರಲಿ ಎಂದು ಅಫ್ಸರ್ ಕೊಡ್ಲಿಪೇಟೆ ಸಲಹೆ ನೀಡಿದ್ದಾರೆ.

- - -

(ಬಾಕ್ಸ್‌)

* ಎಸ್‌ಡಿಪಿಐ ಸಲಹೆಗಳು - ಕ್ಷೇತ್ರ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಳಸಬೇಕು.

- ದಕ್ಷಿಣ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಅಗತ್ಯತೆ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಬೇಕು.

- ತರಗತಿ ಕೊಠಡಿಗಳು, ಶೌಚಾಲಯಗಳು, ಕುಡಿಯುವ ನೀರು, ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಹಾಗೂ ಡಿಜಿಟಲ್ ಶಿಕ್ಷಣ ಸೌಲಭ್ಯಗಳಿಗೆ ಆದ್ಯತೆ ನೀಡಲಿ.

- ₹100 ಕೋಟಿ ಅನುದಾನ ಜನರ ನೈಜ ಅಗತ್ಯಗಳಿಗೆ ಅನುಗುಣವಾಗಿ, ನಿಗದಿತ ಅವಧಿಯೊಳಗೆ ಬಳಸಬೇಕು.

- ಸಕಾಲಿಕ ಮತ್ತು ಪಾರದರ್ಶಕ ಅನುದಾನ ಬಳಕೆಗೆ ಆದ್ಯತೆ ನೀಡಬೇಕು .

- - -

-29ಕೆಡಿವಿಜಿ11: ಅಫ್ಸರ್ ಕೊಡ್ಲಿಪೇಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವರ ಭರವಸೆ, ಧರಣಿ ಅಂತ್ಯಗೊಳಿಸಿದ ಗುತ್ತಿಗೆದಾರರು
ಇಸ್ಲಾಂ ಶ್ರೇಷ್ಠ ಧರ್ಮ ಹೇಳಿಕೆ ದುರದೃಷ್ಟಕರ; ಮಾಜಿ ಶಾಸಕ ರೆಡ್ಡಿ ಬೇಸರ