ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹಿಂದುಗಳ ಮೇಲೆ ಆಕ್ರಮಣಗಳಾದಾಗ ರಕ್ಷಣೆ ಹಾಗೂ ಒಗ್ಗಟ್ಟು ಪ್ರದರ್ಶನಕ್ಕೆ ಮಹಾಪಂಚಾಯ್ತಿ ನಡೆಸಿ ಹಿಂದು ರಕ್ಷಣೆಗೆ ಪ್ರಮುಖ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದೇ ರೀತಿ ಶಿವಮೊಗ್ಗ ಘಟನೆ ಬಳಿಕ ಹಿಂದುಗಳ ರಕ್ಷಣೆ ಸಲುವಾಗಿ ಸಾಧು, ಸಂತರು, ಹಿಂದು ಸಮಾಜದ ಮುಖಂಡರು ಹಾಗೂ ಪ್ರಮುಖರನ್ನು ಕರೆದು ಮಹಾಪಂಚಾಯ್ತಿ ನಡೆಸಲು ವಿಹಿಂಪ ನಿರ್ದಾರ.
ಕನ್ನಡಪ್ರಭ ವಾರ್ತೆ ಮಂಗಳೂರು ಉತ್ತರ ಪ್ರದೇಶ ಮಾದರಿಯಲ್ಲಿ ಹಿಂದುಗಳ ರಕ್ಷಣೆಗೆ ಶಿವಮೊಗ್ಗದಲ್ಲಿ ಮಹಾ ಪಂಚಾಯ್ತಿ ಸಭೆ ನಡೆಸಲಾಗುವುದು ಎಂದು ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ. ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹಿಂದುಗಳ ಮೇಲೆ ಆಕ್ರಮಣಗಳಾದಾಗ ರಕ್ಷಣೆ ಹಾಗೂ ಒಗ್ಗಟ್ಟು ಪ್ರದರ್ಶನಕ್ಕೆ ಮಹಾಪಂಚಾಯ್ತಿ ನಡೆಸಿ ಹಿಂದು ರಕ್ಷಣೆಗೆ ಪ್ರಮುಖ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದೇ ರೀತಿ ಶಿವಮೊಗ್ಗ ಘಟನೆ ಬಳಿಕ ಹಿಂದುಗಳ ರಕ್ಷಣೆ ಸಲುವಾಗಿ ಸಾಧು, ಸಂತರು, ಹಿಂದು ಸಮಾಜದ ಮುಖಂಡರು ಹಾಗೂ ಪ್ರಮುಖರನ್ನು ಕರೆದು ಮಹಾಪಂಚಾಯ್ತಿ ನಡೆಸಲಾಗುವುದು. ಇಡೀ ಹಿಂದು ಸಮಾಜ ಮುಸ್ಲಿಂ ದಂಗೆಕೋರರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಶಿವಮೊಗ್ಗ ಜನತೆ ಕೂಡ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಎನ್‌ಐಎ ತನಿಖೆ ನಡೆಯಲಿ: ಶಿವಮೊಗ್ಗ ಈದ್ ಮೆರವಣಿಗೆ ವೇಳೆ ಸಂಭವಿಸಿದ ಘಟನೆ ಪೂರ್ವಯೋಜಿತ ಕೃತ್ಯವಾಗಿದೆ. ಅದು ಹಿಂದು ಸಮಾಜವನ್ನು ಗುರಿಯಾಗಿಸಿ ನಡೆದ ಘಟನೆಯಾಗಿದ್ದು, ಈದ್ ಮೆರವಣಿಗೆ ಶನೀಶ್ವರ ದೇವಸ್ಥಾನ ಬಳಿ ಬರುತ್ತಿದ್ದಂತೆ ಮುಸ್ಲಿಂ ಮಹಿಳೆಯರು ಕಲ್ಲುತೂರಾಟವಾಗಿದೆ ಎಂದು ಬೊಬ್ಬೆ ಹಾಕಿದ್ದಾರೆ. ಈ ಸುಳ್ಳಿನ ಕಾರಣದಿಂದ ಮೆರವಣಿಗೆಯಲ್ಲಿದ್ದವರು ಅಪ್ರಚೋದಿತರಾಗಿ 10-20 ಹಿಂದು ಮನೆಗಳಿಗೆ ನುಗ್ಗಿ ದಾಳಿ ನಡೆಸಿದ್ದಾರೆ. ಇದು ಇಸ್ಲಾಂ ದಂಗೆಕೋರರ ಕೃತ್ಯವಾಗಿದ್ದು, ಇದರಲ್ಲಿ ಅವರ ಮಹಿಳೆಯರೂ ಇರುವುದು ಗಂಭೀರ ವಿಚಾರವಾಗಿದೆ ಎಂದು ಶರಣ್ ಪಂಪ್‌ವೆಲ್ ಆಗ್ರಹಿಸಿದರು. ಕರಾವಳಿಯಲ್ಲಿ ಮಹಿಷ ದಸರೆಗೆ ಅವಕಾಶ ಇಲ್ಲ: ಅಸುರನಾಗಿರುವ ಮಹಿಷನ ಹೆಸರಿನಲ್ಲಿ ಕರಾವಳಿಯಲ್ಲಿ ಎಲ್ಲಿಯೂ ದಸರಾ ಆಚರಿಸುತ್ತಿಲ್ಲ. ಹಾಗಾಗಿ ಉಡುಪಿಯಲ್ಲಿ ಮಹಿಷ ದಸರಾ ಉತ್ಸವ ನಡೆಸಲು ಯಾವುದೇ ಕಾರಣಕ್ಕೂ ಹಿಂದು ಸಂಘಟನೆಗಳು ಅವಕಾಶ ನೀಡುವುದಿಲ್ಲ. ಒಂದು ವೇಳೆ ಮಹಿಷ ದಸರೆಗೆ ಮುಂದಾದರೆ ಅದನ್ನು ನಿಲ್ಲಿಸಿಯೇ ನಿಲ್ಲಿಸುತ್ತೇವೆ ಎಂದು ಶರಣ್ ಪಂಪ್‌ವೆಲ್ ಹೇಳಿದರು.