ಎಸ್ಸೆಸ್ಸೆಲ್ಸಿಯಲ್ಲಿ ಉತ್ತರ ಕನ್ನಡಕ್ಕೆ ರಾಜ್ಯದಲ್ಲಿ 3ನೇ ಸ್ಥಾನ

KannadaprabhaNewsNetwork |  
Published : Apr 24, 2026, 01:00 AM IST
ದಿಶಾಂತ ನಾಯ್ಕ | Kannada Prabha

ಸಾರಾಂಶ

ಗುರುವಾರ ಪ್ರಕಟವಾದ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದೆ.

624 ಅಂಕಗಳೊಂದಿಗೆ ಕುಮಟಾದ ದಿಶಾಂತ್ ಜಿಲ್ಲೆಗೆ ಟಾಪರ್, ರಾಜ್ಯಕ್ಕೆ ದ್ವಿತೀಯ

ಕನ್ನಡಪ್ರಭ ವಾರ್ತೆ ಕಾರವಾರ

ಗುರುವಾರ ಪ್ರಕಟವಾದ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದು, ರಾಜ್ಯ ಮಟ್ಟದ ಟಾಪ್-10 ಪಟ್ಟಿಯಲ್ಲಿ ಜಿಲ್ಲೆಯ ಒಟ್ಟು 25 ವಿದ್ಯಾರ್ಥಿಗಳು ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಕುಮಟಾದ ದಿಶಾಂತ್ ದಯಾನಂದ್ ನಾಯ್ಕ್ ಜಿಲ್ಲೆಗೆ ಪ್ರಥಮ ಸ್ಥಾನ ಅಲಂಕರಿಸಿ ಜಿಲ್ಲೆಯ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿದ್ದಾರೆ.ಕುಮಟಾ ತಾಲೂಕಿನ ಡಾ. ಎ.ವಿ. ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ದಿಶಾಂತ್ ದಯಾನಂದ್ ನಾಯ್ಕ್ ಒಟ್ಟು 625 ಅಂಕಗಳಿಗೆ 624 ಅಂಕ (99.84) ಪಡೆಯುವ ಮೂಲಕ ಜಿಲ್ಲೆಯ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಕೇವಲ ಒಂದು ಅಂಕದಿಂದ ರಾಜ್ಯದ ಮೊದಲ ಸ್ಥಾನವನ್ನು ಕೈತಪ್ಪಿಸಿಕೊಂಡ ದಿಶಾಂತ್ ಅವರ ಈ ಅಸಾಧಾರಣ ಸಾಧನೆಗೆ ಪೋಷಕರಾದ ಪ್ರಿಯಾ ಮತ್ತು ದಯಾನಂದ್ ನಾಯ್ಕ್ ಹರ್ಷ ವ್ಯಕ್ತಪಡಿಸಿದ್ದು, ಶಾಲಾ ಮಂಡಳಿಯು ವಿದ್ಯಾರ್ಥಿಯ ಶ್ರಮವನ್ನು ಕೊಂಡಾಡಿದೆ.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಬಿಡುಗಡೆ ಮಾಡಿರುವ ಸಾಧಕರ ಪಟ್ಟಿಯಲ್ಲಿ ಭಟ್ಕಳ ತಾಲೂಕಿನ ತೇರ್ನಮಕ್ಕಿಯ ಕೆ.ಪಿ.ಎಸ್. ಶಾಲೆಯ ಸಾನಿಕಾ ಬೈಲೂರು ಹಾಗೂ ಕುಮಟಾದ ಕೊಲಾಬಾ ವಿಠೋಬ್ ಶಾನುಭಾಗ್ ಕಲ್ಬಾಗ್‌ಕರ್ ಪ್ರೌಢಶಾಲೆಯ ರಾಘವ್ ಜಯರಾಮ ಹೆಗಡೆ ತಲಾ 621 ಅಂಕ ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ಭಟ್ಕಳದ ಆನಂದ್ ಆಶ್ರಮ ಕಾನ್ವೆಂಟ್ ಹೈಸ್ಕೂಲ್‌ನ ಪ್ರಥಮ್ ನಾಗರಾಜ್ ನಾಯ್ಕ್ ಮತ್ತು ಕೆ.ಪಿ.ಎಸ್ ತೇರ್ನಮಕ್ಕಿಯ ವರ್ಷಿತಾ ಶಿವಕುಮಾರ್ ನಾಯ್ಕ್ ತಲಾ 620 ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.619 ಅಂಕ ಪಡೆಯುವ ಮೂಲಕ ಭಟ್ಕಳದ ವೈಭವಿ ದೇವಾನಂದ್ ನಾಯಕ್ ಹಾಗೂ ಹೊನ್ನಾವರದ ದಯಾನಂದ ವಿದ್ಯಾ ಭಾರತಿ ಶಾಲೆಯ ರಜತ್ ಪ್ರಭಾಕರ್ ನಾಯ್ಕ್ ಮಿಂಚಿದ್ದಾರೆ. ಇವರೊಂದಿಗೆ 618 ಅಂಕ ಪಡೆದ ಭಟ್ಕಳದ ಯೋಗೇಂದ್ರ ನಾಯ್ಕ್, ಹೊನ್ನಾವರದ ದೇವಿಕಾ ಪೈ ಮತ್ತು ಕುಮಟಾದ ಚೇತನ್ ನಾಯ್ಕ್ ಜಿಲ್ಲೆಯ ಪ್ರತಿಭೆಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕಾರವಾರ, ಹೊನ್ನಾವರ, ಕುಮಟಾ ಹಾಗೂ ಭಟ್ಕಳ ತಾಲೂಕುಗಳ ಅನೇಕ ವಿದ್ಯಾರ್ಥಿಗಳು 617 ಮತ್ತು 616 ಅಂಕ ಗಳಿಸಿದ್ದು, ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ತನ್ನ ಶೈಕ್ಷಣಿಕ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜಿಲ್ಲೆಯ ಈ ಯಶಸ್ಸಿಗೆ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.ಶೇ. 98.09 ಫಲಿತಾಂಶ ದಾಖಲು

ಇನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯು ಒಟ್ಟಾರೆ ಶೇ. 98.09 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಜಿಲ್ಲೆಯಾದ್ಯಂತ ಒಟ್ಟು 8,809 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 8,641 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ತಾಲೂಕುವಾರು ಸಾಧನೆ ಗಮನಿಸುವುದಾದರೆ, ಹೊನ್ನಾವರ ತಾಲೂಕು ಶೇ. 99.08 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಪರೀಕ್ಷೆ ಬರೆದ 1742 ವಿದ್ಯಾರ್ಥಿಗಳಲ್ಲಿ 1726 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 98.63 ರಷ್ಟು ಫಲಿತಾಂಶ ಪಡೆದಿರುವ ಭಟ್ಕಳ ತಾಲೂಕು ದ್ವಿತೀಯ ಸ್ಥಾನದಲ್ಲಿದ್ದು, ಪರೀಕ್ಷೆಗೆ ಹಾಜರಾದ 2040 ವಿದ್ಯಾರ್ಥಿಗಳ ಪೈಕಿ 2012 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದೇ ರೀತಿ, ಅಂಕೋಲಾ ತಾಲೂಕು ಶೇ. 97.78 ರಷ್ಟು ಫಲಿತಾಂಶ ಪಡೆಯುವ ಮೂಲಕ (1128ರಲ್ಲಿ 1103 ವಿದ್ಯಾರ್ಥಿಗಳು ಪಾಸ್) ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಕುಮಟಾ ತಾಲೂಕಿನಿಂದ ಒಟ್ಟು 2082 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2033 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 97.65 ರಷ್ಟು ಫಲಿತಾಂಶದೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಕಾರವಾರ ತಾಲೂಕು ಶೇ. 97.25 ರಷ್ಟು ಫಲಿತಾಂಶ ದಾಖಲಿಸಿ 5ನೇ ಸ್ಥಾನದಲ್ಲಿದ್ದು, ಇಲ್ಲಿ ಪರೀಕ್ಷೆಗೆ ಹಾಜರಾದ 1817 ವಿದ್ಯಾರ್ಥಿಗಳಲ್ಲಿ 1767 ಮಂದಿ ಉತ್ತೀರ್ಣರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿಜಯನಗರ ಜಿಲ್ಲೆ 10 ಸ್ಥಾನಕ್ಕೆ ಏರಿಕೆ
ಹರಪನಹಳ್ಳಿ ತಾಲೂಕಿಗೆ ಶೇ.96.33 ಫಲಿತಾಂಶ; ಜಿಲ್ಲೆಗೆ ಮೂರನೇ ಸ್ಥಾನ