ಮಹಿಳಾ ಪಿಸಿ ಜೊತೆ ವಿಎ ಅಗೌರವದ ವರ್ತನೆ: ದೂರು

KannadaprabhaNewsNetwork |  
Published : Nov 08, 2026, 01:30 AM IST
ಸಭೆ | Kannada Prabha

ಸಾರಾಂಶ

VA's disrespectful behavior towards female PC: Complaint

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಪೊಲೀಸ್ ಠಾಣೆಯಿಂದ ವಿಚಾರಿಸುತ್ತಿದ್ದಾಗ ಹೇರೂರು ಗ್ರಾಮದ ಗ್ರಾಮಲೆಕ್ಕಿಗ (ವಿಎ) ತನ್ನ ಜೊತೆ ದೂರವಾಣಿಯಲ್ಲಿ ಅಗೌರವದಿಂದ ಮಾತನಾಡಿ ಸರ್ಕಾರಿ ಹುದ್ದೆ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಾಳೆಹೊನ್ನೂರು ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ.ಬಾಳೆಹೊನ್ನೂರು ಠಾಣೆ ಮಹಿಳಾ ಪಿಸಿ ಬಿ.ಎಸ್.ಲತಾ ದೂರು ನೀಡಿದವರು. ಹೇರೂರು ಗ್ರಾಪಂ ವ್ಯಾಪ್ತಿಯ ಗ್ರಾಮ ಲೆಕ್ಕಿಗ ಸಿದ್ದಪ್ಪ ಪಿಸಿಯನ್ನು ಅಗೌರವವಾಗಿ ಕಂಡವರು.ಬಿ.ಎಸ್.ಲತಾ ಬಾಳೆಹೊನ್ನೂರು ಠಾಣೆ ಹೇರೂರು ಗ್ರಾಪಂ ವ್ಯಾಪ್ತಿ ಕುಂಬತ್ತಿ ಕಾಲೋನಿ ಎಂಬ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಇಲಾಖೆ ನಿಯಮದಂತೆ ಸಾರ್ವಜನಿಕ ಕುಂದುಕೊರತೆಗಳನ್ನು ವಿಚಾರಿಸಿದ್ದಾರೆ.ಈ ವೇಳೆಯಲ್ಲಿ ಕುಂಬತ್ತಿ ಕಾಲೋನಿ ವೃದ್ಧ ಲಿಂಗಯ್ಯ ನಮಗೆ ಹಲವು ತಿಂಗಳಿನಿಂದ ವೃದ್ಧಾಪ್ಯ ವೇತನ ಬರುತ್ತಿಲ್ಲ. ನನ್ನ ಪತ್ನಿಗೆ ದೃಷ್ಟಿ ದೋಷವಿದ್ದು, ವೃದ್ಧಾಪ್ಯ ವೇತನವೇ ನಮಗೆ ಜೀವನಾಧಾರ. ವೇತನ ಬರದಿರುವ ಕುರಿತು ವಿಎ ಸಿದ್ದಪ್ಪ ಅವರನ್ನು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿ ಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಲತಾ ಸ್ಥಳದಲ್ಲಿಯೇ ಸಾರ್ವಜನಿಕರ ಸಮ್ಮುಖದಲ್ಲಿ ವಿಎ ಸಿದ್ದಪ್ಪ ಅವರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಇದಕ್ಕೆ ಒರಟಾಗಿ ಉತ್ತರಿಸಿದ ವಿಎ, ನನಗೆ ಆದೇಶ ಮಾಡಲು ನೀವು ಯಾರು? ನಿಮ್ಮ ಡ್ಯೂಟಿ ನೀವು ಮಾಡಿ. ನಮ್ಮ ಡ್ಯೂಟಿ ನಾವು ಮಾಡುವುದು ಗೊತ್ತಿದೆ. ಈ ವಿಚಾರ ನಿಮ್ಮ ಠಾಣಾ ವ್ಯಾಪ್ತಿಗೆ ಬರುವುದಿಲ್ಲ. ಪೊಲೀಸ್ ಎಂದು ಹೇಳಿ ನನ್ನನ್ನು ಹೆದರಿಸುತ್ತಿರಾ, ನಿಮ್ಮ ಪಿಎಸ್‌ಐಗೆ ಮಾತನಾಡುತ್ತೇನೆ ಎಂದು ಸರ್ಕಾರಿ ಕರ್ತವ್ಯದ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.ಈ ವರ್ತನೆ ನನ್ನ ವೈಯಕ್ತಿಕ, ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಸಮವಸ್ತ್ರದ ಘನತೆಗೂ ಧಕ್ಕೆ ಉಂಟು ಮಾಡಿದೆ. ಸಾರ್ವಜನಿಕರ ಸಮ್ಮುಖದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಗೌರವ ನೀಡದೆ ಈ ರೀತಿ ವರ್ತಿಸಿದ ಹಿನ್ನೆಲೆ ಯಲ್ಲಿ ಸೂಕ್ತ ವಿಚಾರಣೆ ನಡೆಸಿ ಸರ್ಕಾರಿ ಕರ್ತವ್ಯದಲ್ಲಿರುವ ಅಧಿಕಾರಿಗಳೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಸೂಚಿಸಬೇಕು ಎಂದು ಪಿಸಿ ಲತಾ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ