ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ಲಸಿಕೆ ಹಾಕಿಸಿ: ಡಿಸಿ ಗಂಗೂಬಾಯಿ

KannadaprabhaNewsNetwork |  
Published : Apr 02, 2024, 01:01 AM IST
ಡಿಸಿ ಗಂಗೂಬಾಯಿ ಕಾಲುಬಾಯಿ ಲಸಿಕೆ ಅಭಿಯಾನ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಜಾನುವಾರುಗಳು ಲಸಿಕೆಯಿಂದ ವಂಚಿತವಾಗದಂತೆ ಹಾಗೂ ಜಿಲ್ಲೆಯ ರೈತರು, ಜಾನುವಾರು ಸಾಕಾಣಿಕೆದಾರರು ಕಡ್ಡಾಯವಾಗಿ ತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಕಾರವಾರ: ಜಿಲ್ಲೆಯ ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆಯನ್ನು ತಪ್ಪದೇ ಹಾಕಿಸುವಂತೆ ಹಾಗೂ ಈ ಲಸಿಕಾ ಅಭಿಯಾನದ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಅಂಗವಾಗಿ ಹಸುಗಳಿಗೆ ಪೂಜೆ ಸಲ್ಲಿಸಿ, ಅವುಗಳಿಗೆ ಹಿಂಡಿ ತಿನ್ನಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಏ. 1ರಿಂದ ಏ. 30ರ ವರೆಗೆ ಜಾನುವಾರುಗಳಿಗೆ 5ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ಜಾನುವಾರುಗಳು ಲಸಿಕೆಯಿಂದ ವಂಚಿತವಾಗದಂತೆ ಹಾಗೂ ಜಿಲ್ಲೆಯ ರೈತರು, ಜಾನುವಾರು ಸಾಕಾಣಿಕೆದಾರರು ಕಡ್ಡಾಯವಾಗಿ ತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದರು.

ಕಾಲುಬಾಯಿ ಜ್ವರದಿಂದ, ರೈತರಿಗೆ ಆರ್ಥಿಕ ನಷ್ಟ ಉಂಟಾಗಲಿದ್ದು, ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭ ಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಹಾಗೂ ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲಿ ರೋಗದಿಂದ ಸಂಪೂರ್ಣ ಸುರಕ್ಷತೆಗಾಗಿ ತಮ್ಮ 4- 5 ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲ 1289 ಗ್ರಾಮಗಳಲ್ಲಿ ಪಶುಪಾಲನಾ ಇಲಾಖೆಯಿಂದ ಲಸಿಕೆಯನ್ನು ನೀಡಲು ಬಂದ ಲಸಿಕೆದಾರರಿಗೆ ರೈತರು ಅಗತ್ಯ ಸಹಕಾರ ನೀಡುವ ಮೂಲಕ ಜಿಲ್ಲೆಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಕೋರಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಕೆ. ಎಂ. ಮೋಹನಕುಮಾರ, ಜಿಲ್ಲೆಯ ಎಲ್ಲ ಜಾನುವಾರುಗಳಿಗೆ ಬೇಕಾದಷ್ಟು ಕಾಲುಬಾಯಿ ಲಸಿಕೆ ದಾಸ್ತಾನಿದ್ದು, ಪತ್ರಿ 50- 80 ಜಾನುವಾರುಗಳಿಗೆ ಒಂದು ಬ್ಲಾಕ್‌ನಂತೆ ಒಟ್ಟೂ 4957 ಬ್ಲಾಕ್‌ಗಳನ್ನು ರಚಿಸಲಾಗಿದ್ದು, 233 ಲಸಿಕೆದಾರರ ಮೂಲಕ ಪ್ರತಿ ಜಾನುವಾರುಗಳಿಗೆ ಪ್ರತ್ಯೇಕ ಸಿರಿಂಜ್ ಬಳಸಲಾಗುತ್ತಿದೆ. ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗದ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಡಿಸಿ ಗಂಗೂಬಾಯಿ ಕಾಲುಬಾಯಿ ಲಸಿಕೆ ಅಭಿಯಾನ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್, ಪೌರಾಯುಕ್ತ ಕೆ.ಎಂ. ರವಿಕುಮಾರ, ಪಶುವೈದ್ಯಾಧಿಕಾರಿ ಡಾ. ಪ್ರಶಾಂತಕುಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಭಾಸ್ಕರ ಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ಅವಕಾಶ ತೆರೆದ ಸಮಕಾಲೀನ ಭಾಷಾ ತಂತ್ರಜ್ಞಾನ: ಗೀತಾ ವಾಲೀಕಾರ್
ವಸಾಹತುಶಾಹಿತ್ವ ಒಳಿತು ಕೆಡಕಿನ ಸಂತೆ: ಡಾ. ಕೆ. ವೆಂಕಟೇಶ