ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಹಿರೇಕೆರೂರು
ಮಗುವಿಗೆ ಪೋಲಿಯೊ ಹನಿ ಹಾಕಿಸುವುದರಿಂದ ದೇಹದಲ್ಲಿ ಪೋಲಿಯೋ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬರುತ್ತದೆ. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಐದು ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಹಾಕಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಮನವಿ ಮಾಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಐದು ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಬಾರಿಯೂ ೨ ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಗುವಿನ ಸಂಪೂರ್ಣ ರಕ್ಷಣೆ ಮಾಡಬೇಕು. ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಸಹಕರಿಸುವ ಮೂಲಕ ಪೋಲಿಯೋ ವಿರುದ್ಧ ಭಾರತ ಸಾಧಿಸಿರುವ ಗೆಲುವನ್ನು ಮುಂದುವರೆಸಲು ಕೈಜೋಡಿಸಬೇಕು ಎಂದರು.ತಾಲೂಕು ವೈದ್ಯಾಧಿಕಾರಿ ಡಾ. ಝಡ್.ಆರ್. ಮಕಾನ್ದಾರ್ ಮಾತನಾಡಿ, ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ತಾಲೂಕಿನ ನಗರ ಪ್ರದೇಶಗಳಲ್ಲಿ ೨೧೧೪ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೧೭೯೬೪ ಒಟ್ಟು ೨೦೦೭೮ ಐದು ವರ್ಷದ ಒಳಗಿನ ಮಕ್ಕಳಿದ್ದು, ಇಂದು ಬೂತ್‌ನಲ್ಲಿ, ಮಾ.೪ ಮತ್ತು ೬ ವರೆಗೆ ಲಸಿಕಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೧೪೬ ಬೂತ್‌ಗಳನ್ನು ತೆರೆಯಲಾಗಿದೆ. ೩೪ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ೨೨೮ ಆಶಾ ಕಾರ್ಯಕರ್ತರು, ೩೫೪ ಅಂಗನವಾಡಿ ಕಾರ್ಯಕರ್ತೆಯರು, ೪ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಇಬ್ಬರು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ೨೩ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹೊನ್ನಪ್ಪ ಜಿ.ಎಂ., ಪಪಂ ಸದಸ್ಯರಾದ ಕಂಠಾಧರ ಅಂಗಡಿ, ಸನಾವುಲ್ಲಾ ಮಕನ್ದಾರ, ರಜಿಯಾ ಅಸದಿ, ಕವಿತಾ ಹಾರ್ನಳ್ಳಿ, ಪಪಂ ಮಾಜಿ ಸದಸ್ಯ ನಾಗರಾಜ ಗುಡ್ಡಳ್ಳಿ ಶಿವಪ್ರಸಾದ ಬಿ.ಎಸ್. ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.