ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೇಸಿಗೆ ಇರುವುದರಿಂದ ಜಾನುವಾರುಗಳಿಗೆ ಕಾಲುಬಾಯಿ ರೋಗ, ಜ್ವರ ಬರುವ ಸಾಧ್ಯತೆ ಇರುತ್ತದೆ. ಇವುಗಳಿಂದ ಜಾನುವಾರುಗಳನ್ನು ರಕ್ಷಿಸಲು ಮುಂಜಾಗೃತ ಕ್ರಮವಾಗಿ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ಸೋಮವಾರ ನವನಗರದ ಜಿಲ್ಲಾ ಪಾಲಿಕ್ಲಿನಿಕ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಪ್ತೋ ಎಂಬ ವೈರಾಣುವಿನಿಂದ ಕಾಲುಬಾಯಿ ಬರುತ್ತದೆ. ಕೆಲವು ಬಾರಿ ಜಾನುವಾರುಗಳ ಪ್ರಾಣಹಾನಿಯಾಗಿ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಈ ರೋಗದಿಂದ ಜಾನುವಾರುಗಳನ್ನು ಮುಕ್ತಗೊಳಿಸಲು ಲಸಿಕೆ ಅವಶ್ಯವಾಗಿ ಹಾಕಿಸಬೇಕು. ಆದ್ದರಿಂದ ಜಿಲ್ಲೆಯ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಸೂಚಿಸಿದರು.ಈ ರೋಗದ ಲಕ್ಷಣ ಬಾಯಿಯಲ್ಲಿ ಹುಣ್ಣು, ಮೇವು ತಿನ್ನದೇ ಇರುವುದು, ಬಾಯಿಯಿಂದ ರಕ್ತ ಸ್ರಾವವಾಗುವುದು. ಇದು ಬಾಯಿ ಬೇನೆ ಲಕ್ಷಣವಾದರೆ, ಕಾಲಿನ ಗೊರಸುಗಳಲ್ಲಿ ಹುಣ್ಣಾಗಿ ಕಾಲು ನೆಲಕ್ಕೆ ಉರಲಾಗದಂತಹ ಪರಿಸ್ಥಿತಿ ಬರುತ್ತದೆ. ಅದರಲ್ಲೂ ಈ ರೋಗ ಮಿಶ್ರತಳಿ ರಾಸುಗಳಿಗೆ ಯಾವಾಗ ಬೇಕಾದರೂ ಬರಬಹುದಾಗಿದೆ. ಆದರೆ ಸ್ವದೇಶಿ ತಳಿಯ ರಾಸುಗಳಿಗೆ ಬೇಸಿಗೆಯಲ್ಲಿ ಮಾತ್ರ ಕಂಡು ಬರುತ್ತದೆ. ಈ ರೋಗದಿಂದ ಬಳಲುತ್ತಿರುವ ರಾಸುಗಳಿಂದ ರಾಸುಗಳಿಗೆ ಗಾಳಿ ನೀರಿನಿಂದ ಸೊಂಕು ಹರಡುತ್ತದೆ. ಇದರಿಂದ ಮುಕ್ತಿ ಹೊಂದಲು ಪ್ರತಿ 6 ತಿಂಗಳಿಗೊಮ್ಮೆ ಲಸಿಕೆಯನ್ನು ಹಾಕಿಸಬೇಕು ಎಂದರು.
ಈ ವೇಳೆ ಲಸಿಕಾ ಜಾಗೃತಿಯ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಶಶಿಧರ ಕುರೇರ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಎಚ್.ಕರಡಿಗುಡ್ಡ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಜಿ.ಬಿ.ಗುರವ, ಬಾಗಲಕೋಟೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಆರ್.ಎಸ್.ಪದರಾ, ನಿವೃತ್ತ ಉಪ ನಿರ್ದೇಶಕ ಡಾ.ವಿ.ಕೆ.ಕೋವಳ್ಳಿ ಹಾಗೂ ಸಿಬ್ಬಂದಿ ಇದ್ದರು.--
ಬಾಕ್ಸ್ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಪೂರ್ವದಲ್ಲಿ ಪಾಲಿಕ್ಲಿನಿಕ್‌ಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿನ ಚಿಕಿತ್ಸಾ ಕೊಠಡಿ, ಕ್ಷ-ಕಿರಣ ಕೊಠಡಿ ಸೇರಿದಂತೆ ಇತರೆ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಸಿಗೆ ಬಿಸಿಲಿನಿಂದ ವಾಂತಿ- ಭೇದಿಯಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾನದ ಬಗ್ಗೆ ವಿಚಾರಿಸಿದರು. ಜಾನುವಾರಿಗಳಿಗೆ ಆಹಾರ ತಿನ್ನಿಸಿದರು.