ಗಡಿ ಶಾಲೆಗಳನ್ನು ಮುಚ್ಚಲ್ಲ, ಕನ್ನಡ ಉಳಿಸಿ ಬೆಳೆಸಲು ಬದ್ಧ । ಬೀದರ್‌ನಲ್ಲಿ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ ಬೀದರ್ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳೆರಡು ಕನ್ನಡದ ಎರಡು ಕಣ್ಣುಗಳಿದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ್ರಥಮ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಶ್ರೀಮಂತಿಕೆ ತಂದು ಕೊಟ್ಟ ಕೀರ್ತಿ ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದರು.ಭೂಮಿಯನ್ನು ಸ್ವರ್ಗವನ್ನಾಗಿ ಮಾಡುವ, ಮನದಲ್ಲಿರುವ ಕ್ರೌರ್ಯ ತೊಲಗಿಸುವಂಥದ್ದು ಸಾಹಿತ್ಯ. ನಮ್ಮ ಮಾತೃಭಾಷೆ ಹಾಗೂ ಸಾಹಿತ್ಯದಿಂದಲೇ ನಾವು ಅಭಿವೃದ್ಧಿ ಹೊಂದಿದ್ದೇವೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.500 ವರ್ಷಗಳ ಹಿಂದೆ ದಾಸರು ಪದಗಳ ಮೂಲಕ ಮೌಢ್ಯ ಹೋಗಲಾಡಿಸಲು ಪ್ರಯತ್ನಿಸಿದರೆ 800 ವರ್ಷಗಳ ಹಿಂದೆ ವಚನಗಳ ಮೂಲಕ ವಚನ ಸಾಹಿತ್ಯ ಜನರಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಗಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದ ಅವರು, ಸಮಾಜ ಬದಲಾವಣೆ ಮಾಡುವ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳಾದ ನಾವು ಮೊದಲು ಬದಲಾಗಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಡಾ.ಬಾಬಾ ಸಾಹೇಬ ಅವರು ಕೊಟ್ಟಿರುವಂಥ ಸಂವಿಧಾನದ ಮಾರ್ಗದಲ್ಲಿಯೇ ನಡೆಯುವುದ ರೊಂದಿಗೆ ದೀನ, ದಲಿತರ ದಮನಿತರ ಏಳ್ಗೆಗೆ ಶ್ರಮಿಸುವತ್ತ ನಮ್ಮ ಕಾಂಗ್ರೆಸ್ ಸರ್ಕಾರ ಸದಾ ಹೆಜ್ಜೆ ಇಟ್ಟಿದೆ ಎಂದರು.
ಪತ್ರಿಕಾ ಮಾಧ್ಯಮ ತನ್ನ ವಿಶ್ವಾಸ ಉಳಿಸಿಕೊಂಡಿದೆ. ಬೆಳ್ಳಂಬೆಳಗ್ಗೆ ಪತ್ರಿಕೆ ಓದಿದರೆ ಮಾತ್ರ ಸಮಾಧಾನ ಎಂದ ಅವರು, ಕನ್ನಡ ಭಾಷೆ ಉಳಿಸಿ ಬೆಳೆಸಲು ಸರ್ಕಾರ ಕಟಿಬದ್ಧವಾಗಿದೆ. ಸುಧಾರಿತ ರಸ್ತೆಗಳ ಮೂಲಕ ಇದೀಗ ಕರ್ನಾಟಕ ಗುರುತಿಸಿಕೊಳ್ಳುವಂತೆ ಮಾಡಿದ್ದೇವೆ ಎಂದರು. ಗಡಿ ಶಾಲೆಗಳನ್ನು ಮುಚ್ಚಲ್ಲ, ಕನ್ನಡ ಉಳಿಸಿ ಬೆಳೆಸಲು ಬದ್ಧ :ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರು ನೀಡಿದ ಸಲಹೆಯಂತೆ ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡೋಲ್ಲ. ಕನ್ನಡವನ್ನು ಬೆಳೆಸಲು ಮತ್ತು ಮಾತೃಭಾಷೆಯನ್ನು ಮತ್ತಷ್ಟು ಪಸರಿಸಲು ನಾವು ಒಗ್ಗಟ್ಟಿನ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.ಜ.30ರ ಒಳಗಾಗಿ ಕನ್ನಡ ಭವನ ಉದ್ಘಾಟನೆ :ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯವನ್ನು ಬೆಳೆಸಲು ಹಗಲಿರುಳು ದುಡಿಯುತ್ತಿರುವ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಕಾರ್ಯ ಶ್ಲಾಘನೀಯ. ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕೊಡುಗೆಯಾಗಬಲ್ಲ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಭವನವನ್ನು ಬರುವ ಜ. 30ರ ಒಳಗಾಗಿ ಉದ್ಘಾಟಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಸಮ್ಮೇಳನದ ಸಾನ್ನಿಧ್ಯವನ್ನು ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು, ನೇತೃತ್ವವನ್ನು ಗುರುಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಸ್ವಾಮಿಗಳು ಹಾಗೂ ತಿಂಥಿಣಿ ಕನಕ ಪೀಠದ ಸಿದ್ದರಾಮನಂದಪುರಿ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ರಘುನಾಥರಾವ್ ಮಲ್ಕಾಪೂರೆ ಮಾಜಿ ಸಚಿವ ಎಚ್.ಎಂ.ರೇವಣ್ಣ, ರಘುನಾಥರಾವ್ ಮಲ್ಕಾಪೂರೆ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಂಡಿತರಾವ್ ಚಿದ್ರಿ ಮಾತನಾಡಿದರು. ಸರ್ವಾಧ್ಯಕ್ಷರಾದ ಬಿ.ಎಂ.ಅಮರವಾಡಿ, ನಗರಸಭೆ ಅಧ್ಯಕ್ಷರಾದ ಮಹ್ಮದ್ ಗೌಸ್, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಮುಖಂಡರಾದ ಅಮೃತರಾವ್ ಚಿಮಕೋಡೆ, ಮಾಳಪ್ಪ ಅಡಸಾರೆ, ಪೀರಪ್ಪ ಔರಾದೆ ಇದ್ದರು. ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ನೇತೃತ್ವದ ತಂಡ ನೃತ್ಯ ರೂಪಕ ಪ್ರದರ್ಶಿಸಿತು. ಶಿವಾನಿ ಶಿವದಾಸ ಸ್ವಾಮಿ ಅವರಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ಶಿವಶಂಕರ ಟೋಕರೆ ನಿರೂಪಿಸಿ ಟಿ.ಎಂ.ಮಚ್ಛೆ ಸ್ವಾಗತಿಸಿದರೆ ಸಂತೋಷ ಜೋಳದಾಪಕೆ ವಂದಿಸಿದರು.