- ಲಿಂ.ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಜಯಂತ್ಯುತ್ಸವದಲ್ಲಿ ಬಿ.ವಾಮದೇವಪ್ಪ । ಕೃತಿ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯ ಹೊರತುಪಡಿಸಿದರೆ, 12ನೇ ಶತಮಾನದ ಬಸವಾದಿ ಶರಣರ ಕೊಡುಗೆಯೂ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.ನಗರದ ಎಂಸಿಸಿ ಬಿ ಬ್ಲಾಕ್‌ನ ಬಸವ ಮಂಟಪದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಲಿಂಗೈಕ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 110ನೇ ಜಯಂತ್ಯುತ್ಸವ, ಪರಿಷತ್ ಸಂಸ್ಥಾಪಕರ ದಿನಾಚರಣೆ, ಕೃತಿ ಲೋಕಾರ್ಪಣೆ ಹಾಗೂ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭುವನದ ಭಾಗ್ಯ ಕೃತಿಯ ಲೇಖಕ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜು ಗುರುವಿನ ಸ್ಮರಣೆ ಎಂಬ ವಿಷಯವಾಗಿ ಮಾತನಾಡಿ, ಇಂದು ಶರಣ ಸಾಹಿತ್ಯ ಪರಿಷತ್ತು ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಸುತ್ತೂರು ಮಠದ ಲಿಂಗೈಕ್ಯ ಜಗದ್ಗುರುಗಳೇ ಕಾರಣ. ರಾಜೇಂದ್ರ ಮಹಾಸ್ವಾಮೀಜಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. 1954ರಲ್ಲಿ ಜೆ.ಎಸ್.ಎಸ್. ಮಹಾವಿದ್ಯಾಪೀಠ ಸ್ಥಾಪಿಸಿ, ನೂರಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆ ಕಟ್ಟಿದರು. ಕೃಷಿ, ವೈದ್ಯಕೀಯ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ, ಹಸಿದವರಿಗೆ ಅನ್ನ, ಬಡವರಿಗೆ ಅಕ್ಷರ ನೀಡಿದ ತ್ರಿವಿಧ ದಾಸೋಹಿ ಸಂತರಾಗಿದ್ದರು ಎಂದರು. ಶಿಕ್ಷಣದ ಮೂಲಕ ಸಮಾಜ ಉನ್ನತೀಕರಿಸಲು ಪ್ರಯತ್ನಿಸಿದ ಕೀರ್ತಿ ಸುತ್ತೂರು ಜಗದ್ಗುರು ಅವರಿಗೆ ಸಲ್ಲುತ್ತದೆ. ಜಾತಿ, ಸಮುದಾಯಗಳನ್ನೆಲ್ಲಾ ಮೀರಿ ಎಲ್ಲರಿಗೂ ಶಿಕ್ಷಣ ದೊರಕುವಂತೆ ಮಾಡಿದರು. ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳಿಗೆ ಬದುಕನ್ನು ಮುಡಿಪಾಗಿಟ್ಟಿದ್ದರು. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ರಾಜಗುರು ತಿಲಕ ಬಿರುದನ್ನೂ ಪಡೆದಿದ್ದರು ಎಂದು ತಿಳಿಸಿದರು.
- - -
ದಾವಣಗೆರೆಯಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಲಿಂಗೈಕ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 110ನೇ ಜಯಂತ್ಯುತ್ಸವ, ಪರಿಷತ್ ಸಂಸ್ಥಾಪಕರ ದಿನಾಚರಣೆ, ಕೃತಿ ಲೋಕಾರ್ಪಣೆ ಸಮಾರಂಭ ನಡೆಯಿತು.