ಹಾನಗಲ್ಲ:ಬದುಕಿನ ಮೂಲ ಸಾರವೇ ವಚನ ಸಾಹಿತ್ಯವಾಗಿದ್ದು, ವಚನಗಳು ಮನೆ ಮನೆಯ ಮಾತಾಗಿ ಸುಸಂಸ್ಕೃತ ಜೀವನಕ್ಕೆ ದಾರಿ ದೀಪವಾಗಿ ಸ್ವೀಕರಿಸಬೇಕು ಎಂದು ಭಾರತೀಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಪ್ರಹ್ಲಾದ ಸಾಂಬ್ರಾಣಿ ತಿಳಿಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ನ್ಯಾಯವಾದಿ ಎಂ.ಎಸ್. ಹುಲ್ಲೂರ, ವಚನಗಳು ಮಕ್ಕಳು ಯುವ ಪೀಳಿಗೆಗೆ ತಲುಪುವ ಕೆಲಸವಾಗಬೇಕು. ವಚನಕಾರರು ಸಮಾಜಕ್ಕೆ ಬೋಧನೆಗಾಗಿ ವಚನಗಳನ್ನು ಬರೆದವರಲ್ಲ. ತಮ್ಮ ಜೀವನಾನುಭವನ್ನು ವಚನಗಳಾಗಿ ರಚಿಸಿದರು. ಇಂದು ನ್ಯಾಯಾಲಯಗಳು ನೀಡುವಂತಹ ನ್ಯಾಯ ನಿರ್ಣಯಗಳನ್ನು ಅಂದಿನ ವಚನಕಾರರು ಯಾರಿಗೂ ಅನ್ಯಾಯವಾಗದಂತೆ ನ್ಯಾಯ ನಿರ್ಣಯನೀಡುತ್ತಿದ್ದರು. ಎಲ್ಲರನ್ನೂ ಸಮನಾಗಿ ಕಾಣುವ, ಸಮಾಜಮುಖಿಯಾಗಿ ಬದುಕುವ ನೀತಿ ನಿಯಮಗಳ ಒಟ್ಟು ಮೊತ್ತವೇ ವಚನಗಳು ಎಂದರು.
ಉಪನ್ಯಾಸ ನೀಡಿದ ಕದಳಿ ಮಹಿಳಾ ವೇದಿಕೆ ಪದಾಧಿಕಾರಿ ಸುಜಾತಾ ನಂದಿಶೆಟ್ಟರ, ಅಕ್ಕಮಹಾದೇವಿ ಕೌಶಿಕನ ಲಾಲಸೆಯನ್ನು ತಿರಸ್ಕರಿಸಿ ವೀರ ವಿರಾಗಿಣಿಯಾದದ್ದು ಮಾತ್ರವಲ್ಲ, ಇಡೀ ಮಹಿಳಾ ಸಮಾಜಕ್ಕೆ ತ್ಯಾಗದ ದೊಡ್ಡ ಸಂದೇಶ ನೀಡಿದ್ದಾಳೆ. ಯಾವ ಪುರುಷನಿಗೂ ಸಮನಾಗಿ ನಿಲ್ಲುವ ಶಕ್ತಿ ಇದೆ. ಶರಣ ಸಂಗಮದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದ ಶ್ರೇಯಸ್ಸು ಬಸವಾದಿ ಶಿವಶರಣರಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದಲ್ಲಿ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಅಧ್ಯಕ್ಷ ಸಿ. ಮಂಜುನಾಥ, ಶಿಕ್ಷಕಿ ರೇಣುಕಾ ಕರೆಗೊಂಡರ್, ಸುಮಂಗಲಾ ಕಟ್ಟಿಮಠ, ರೂಪಾ ಸಾಂಬ್ರಾಣಿ, ಪೂರ್ಣಿಮಾ ಶಿವಗಿರಿ ಪಾಲ್ಗೊಂಡಿದ್ದರು, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಉಪಾಧ್ಯಕ್ಷ ಶಂಭುಲಿಂಗಯ್ಯ ಹೇಮಗಿರಿಮಠ ಆಶಯ ನುಡಿ ನುಡಿದರು. ಉಪಾಧ್ಯಕ್ಷ ಅಶೋಕ ದಾಸರ ಸ್ವಾಗತಿಸಿದರು. ಕಾರ್ಯದರ್ಶಿ ಸುಭಾಸ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಶೀಲಾ ಗಾಣಿಗೇರ ವಂದಿಸಿದರು.