ವಚನ ಸಾಹಿತ್ಯ ಆದರ್ಶ ಬದುಕಿಗೆ ದಾರಿದೀಪ

KannadaprabhaNewsNetwork |  
Published : Apr 13, 2024, 01:04 AM IST
೧೨ಬಿಎಸ್ವಿ೦೧- ಬಸವನಬಾಗೇವಾಡಿ ತಾಲೂಕಿನ ಯರನಾಳ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಗುರುವಾರ ಸಂಜೆ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

೧೨ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಎಲ್ಲ ಧರ್ಮದವರು ಶರಣರಾಗುವ ಧನ್ಯತೆ ಪಡೆಯುವ ಮೂಲಕ ಅದ್ಭುತವಾದ ಕ್ರಾಂತಿ ನಡೆಯಿತು. ಈ ಕಾಲಘಟದಲ್ಲಿ ಬಸವಾದಿ ಶರಣರಿಂದ ರಚನೆಯಾಗಿರುವ ವಚನ ಸಾಹಿತ್ಯ ಎಲ್ಲರಿಗೂ ಆದರ್ಶದ ಬದುಕಿಗೆ ದಾರಿದೀಪವಾಗಿದೆ ಎಂದು ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

೧೨ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಎಲ್ಲ ಧರ್ಮದವರು ಶರಣರಾಗುವ ಧನ್ಯತೆ ಪಡೆಯುವ ಮೂಲಕ ಅದ್ಭುತವಾದ ಕ್ರಾಂತಿ ನಡೆಯಿತು. ಈ ಕಾಲಘಟದಲ್ಲಿ ಬಸವಾದಿ ಶರಣರಿಂದ ರಚನೆಯಾಗಿರುವ ವಚನ ಸಾಹಿತ್ಯ ಎಲ್ಲರಿಗೂ ಆದರ್ಶದ ಬದುಕಿಗೆ ದಾರಿದೀಪವಾಗಿದೆ ಎಂದು ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿ ಅವರ ಜನ್ಮಸುವರ್ಣ ಮಹೋತ್ಸವವನ್ನು ಗುರುವಾರ ಸಂಜೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಬಸವಣ್ಣನವರು ಸಾಮಾಜಿಕ ಕ್ರಾಂತಿಯಿಂದಾಗಿ ತಮ್ಮ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಬೇಕಾಯಿತು. ವಚನ ಸಾಹಿತ್ಯ ಸಂರಕ್ಷಣೆ ಚನ್ನಬಸವಣ್ಣನವರಿಗೆ ಜವಾಬ್ದಾರಿ ವಹಿಸಿ ತಾವು ಕೂಡಲಸಂಗಮದ ಕಡೆಗೆ ತೆರಳಿದರು. ಚನ್ನಬಸವಣ್ಣನವರು ಸೇರಿದಂತೆ ಅನೇಕ ಶರಣರು ವಚನ ಸಾಹಿತ್ಯದ ಸಂರಕ್ಷಣೆ ಮಾಡಿದರು. ೧೨ನೇ ಶತಮಾನದಲ್ಲಿ ಧರ್ಮದ ಜ್ಯೋತಿ ಬೆಳಗಿ ನಂತರ ಕೆಲವರ್ಷಗಳ ಕಾಲ ಆರಿ ಹೋಯಿತು. ನಂತರ ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದಲ್ಲಿ ೧೦೧ ವಿರಕ್ತರಿಂದ ಮತ್ತೆ ವಚನ ಸಾಹಿತ್ಯದ ಜ್ಯೋತಿ ಬೆಳಗಿತು. ನಂತರ ತೋಂಟದ ಸಿದ್ದಲಿಂಗ ಯತಿಗಳು, ನಿಜಗುಣ ಶಿವಯೋಗಿಗಳು, ಮೃತ್ಯುಂಜಯ ಸ್ವಾಮೀಜಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ವಚನ ಸಾಹಿತ್ಯವನ್ನು ನಾಡಿನಲ್ಲಿ ಪಸರಿಸುವ ಕೈಂಕರ್ಯ ಕೈಗೊಂಡರು. ವಚನ ಸಾಹಿತ್ಯದ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿಷ್ಯರ ಸಂಪತ್ತನ್ನು ಹರಣ ಮಾಡುವವರು ನಿಜವಾದ ಗುರುವಲ್ಲ. ಶಿಷ್ಯರ ದುಃಖ, ಸಂಕಷ್ಟ ದೂರಮಾಡುವವರೇ ನಿಜವಾದ ಗುರು. ಭಗವಂತ ನಮಗೆ ಅದ್ಭುತವಾದ ಶಕ್ತಿ ನೀಡಿದ್ದಾನೆ. ಈ ಶಕ್ತಿಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಇಡೀ ಸಮಾಜಕ್ಕೆ ಮಾರ್ಗದರ್ಶನ ಮಾಡುವವರ ಆರೋಗ್ಯ ಚೆನ್ನಾಗಿ ಇರಬೇಕು. ಶ್ರೀಮಠದ ಶ್ರೀಗಳು ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡುತ್ತಿರುವ ಸೇವೆ ಅನನ್ಯ. ಇವರ ಸೇವೆ ಇಡೀ ಸಮಾಜಕ್ಕೆ ನಿರಂತರವಾಗಿ ಸಿಗುವಂತಾಗಬೇಕು. ಶ್ರೀಗಳು ತಮ್ಮ ಸೇವಾ ಕಾರ್ಯದೊಂದಿಗೆ ತಮ್ಮ ಆರೋಗ್ಯದ ಕಡೆಗೆ ಗಮನ ಇಟ್ಟುಕೊಳ್ಳಬೇಕೆಂದರು.

ಸಾನಿಧ್ಯ ವಹಿಸಿದ್ದ ಶಿವಗಂಗೆಯ ಮೇಲಗವಿಮಠದ ಡಾ.ಮಲೇಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ, ಡಾ.ಬಸವರಾಜ ಅಸ್ಕಿ, ಮಾನವ ಕಂಪ್ಯೂಟರ್ ಬಸವರಾಜ ಉಮರಾಣಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಅಸೋಸಿಯೇಷನ್ ಅಧ್ಯಕ್ಷ ಡಾ.ಶಿವಾನಂದ ಕೆಲ್ಲೂರ, ಸಾಹಿತಿ ಡಾ.ಸಿದ್ದಣ್ಣ ಉತ್ನಾಳ, ಯರನಾಳ ಗ್ರಾಪಂ ಅಧ್ಯಕ್ಷ ಶಾಂತಾಬಾಯಿ ಕೋಲಕಾರ ಇತರರು ಇದ್ದರು. ಸಿದ್ದಾರ್ಥ ಬೈಚಬಾಳ ಪ್ರಾರ್ಥಿಸಿದರು. ಡಾ.ಅಮರೇಶ ಮಿಣಜಗಿ ಸ್ವಾಗತಿಸಿದರು. ಗಿರಿಜಾ ಪಾಟೀಲ, ಪುಷ್ಪಾ ಗುಳೇದ, ಶರಣಬಸು ಹಳಮನಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಾಜೇಸಾಬ ಕೊರಬು, ರೇವಣಸಿದ್ದ ಪ್ಯಾಟಿಗೌಡರ, ಡಾ.ಬಸವರಾಜ ಅಸ್ಕಿ, ಡಾ.ಬಸವರಾಜ ಸಗರನಾಳ ದಂಪತಿಗಳನ್ನು ಆದರ್ಶ ದಂಪತಿಗಳೆಂದು ಸನ್ಮಾನಿಸಲಾಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...