ಕನ್ನಡಪ್ರಭ ವಾರ್ತೆ, ದಾವಣಗೆರೆ ಪ್ರಪಂಚದ ಅತ್ಯದ್ಭುತಗಳಲ್ಲಿ ಒಂದಾದ ‘ವಚನ ಸಾಹಿತ್ಯ’ವು ಮನಸ್ಸಿನ, ಸಮಾಜದ ಅಂಕುಡೊಂಕುಗಳ ತಿದ್ದುವುದಕ್ಕೆ ಕೈಗನ್ನಡಿಯಾಗಿವೆ. ಇತಿಹಾಸ ಸಂಶೋಧಕರು, ನಾಟಕ ರಚನೆಕಾರರು, ಹಾಡು ಕಟ್ಟುವವರು, ಸಮಾಜ ಸುಧಾರಕರು, ಅಧ್ಯಾತ್ಮ ಸಾಧಕರು ಹಾಗೂ ಲೋಕದ ಅನುಭವ ಬಯಸುವವರಿಗೆ ವಚನ ಸಾಹಿತ್ಯ ಸ್ಫೂರ್ತಿಯಾಗಿವೆ ಎಂದು ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಎಚ್. ದೊಡ್ಡಗೌಡರ್ ಹೇಳಿದರು.
ಅಕ್ಕ ಮಹಾದೇವಿ ಲೌಕಿಕ ಸುಖಭೋಗಗಳನ್ನು ತೊರೆದು, ವಚನಗಳ ಮೂಲಕ ಅಸ್ಮಿತೆ ಉಳಿಸಿಕೊಂಡು, ಶರಣೆಯರ ಕಣ್ಮಣಿ ಎನಿಸಿದ್ದಾರೆ. ಲಂಚವಂಚನೆಗೆ ಕೈಯೊಡ್ಡಲ್ಲ, ದಾರಿಯಲ್ಲಿ ಬಿದ್ದ ಅನ್ಯರ ಒಡವೆ- ವಸ್ತು ಮುಟ್ಟಲ್ಲ ಎಂದು ತನಗೆ ತಾನೇ ನಿರ್ಬಂಧ ಹಾಕಿಕೊಂಡ ಸತ್ಯಸಾಧಕಿ ಶರಣೆ ಸತ್ಯಕ್ಕ, ಕಾಯಕವೇ ಮೇಲೆಂದು ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು ಆಯ್ದಕ್ಕಿ ಲಕ್ಕಮ್ಮ, ವಿಶಾಲ ಮನೋಭಾವನೆ, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯುಳ್ಳ ಮುಕ್ತಾಯಕ್ಕ, ಕಾಯದ ಪ್ರಾಣದ ಪ್ರಸಾದವ ಇಹಪರದ ಹಂಗು ನಮಗಿಲ್ಲ ಎಂದು ನುಡಿದ ಶರಣೆ ನೀಲಾಂಬಿಕೆಯನ್ನು ಅವರ ವಚನಗಳ ಮೂಲಕ ಸ್ಮರಿಸಿದರು.
ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಹೆಣ್ಣು ಬಾಹ್ಯ ಸೌಂದರ್ಯಕ್ಕಷ್ಟೇ ಬೆಲೆ ಕೊಡದೇ, ಆಂತರಿಕ ಸೌಂದರ್ಯವನ್ನೂ ಬೆಳೆಸಿಕೊಳ್ಳಬೇಕು. ತಾನೂ ಬೆಳೆದು, ಕುಟುಂಬ ಹಾಗೂ ಸಮಾಜವನ್ನು ನೈತಿಕ ನೆಲೆಗಟ್ಟಿನಲ್ಲಿ ನಿಲ್ಲಿಸುವುದು ಅವಳ ಮಹತ್ವದ ಜವಾಬ್ದಾರಿಯಾಗಿದೆ. ಮಹಿಳೆ ಎಂತಹ ಮಹತ್ವದ ಸ್ಥಾನ ಅಲಂಕರಿಸಿದ್ದರೂ ತಾನೊಂದು ಹೆಣ್ಣೆಂಬುದನ್ನು ಎಂದೂ ಮರೆಯಬಾರದು. ತನ್ನ ಹೆಣ್ತನದ ಮೂಲಬೇರುಗಳಲ್ಲಿ ಅಡಗಿರುವ ಅಕ್ಕರೆಯ ಅನುಭೂತಿ ಮಾಸಲು ಎಂದೂ ಬಿಡಬಾರದು ಎಂದು ತಿಳಿಸಿದರು.ಎಂ.ಎಂ. ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಕೆ.ಟಿ.ನಾಗರಾಜ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ನಿರ್ದೇಶಕರಾದ ಷಡಕ್ಷರಪ್ಪ ಎಂ. ಬೇತೂರು, ಪರಿಮಳ ಜಗದೀಶ, ಮಮತಾ ರುದ್ರಮುನಿ, ಶಿಕ್ಷಣ ಮಹಾವಿದ್ಯಾಲಯದ ಅಧ್ಯಾಪಕರು, ಪ್ರಶಿಕ್ಷಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾವನಾ ಪ್ರಾರ್ಥಿಸಿದರು. ಕೆ.ಟಿ.ಲತಾ ಸ್ವಾಗತಿಸಿ, ಟಿ.ಎಸ್.ಸಿಂಧು ಕಾರ್ಯಕ್ರಮ ನಿರೂಪಿಸಿದರು. ಎಂ.ಪೂಜಾ ವಂದಿಸಿದರು.- - - -26ಕೆಡಿವಿಜಿ32ಃ
ದಾವಣಗೆರೆ ತಾಲೂಕು ಕ.ಸಾ.ಪ.ದಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಅನಿತಾ ಎಚ್. ದೊಡ್ಡಗೌಡರ್ ಉದ್ಘಾಟಿಸಿದರು.