ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ಮಂಗಳವಾರ ವಚನ ಸಾಹಿತ್ಯದ ಸಂರಕ್ಷಕ ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಬಸವಾದಿ ಶರಣರು 12ನೇ ಶತಮಾನದಲ್ಲಿ ತಾಳೆಗರಿಯಲ್ಲಿ ರಚಿಸಿದ ವಚನಗಳನ್ನು ಪರಿಶೋಧಿಸಿ ಜತನದಿಂದ ಕಾದಿಟ್ಟು ಅವುಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಜನಮಾನಸದಲ್ಲಿ ಜಾಗೃತಿಗೊಳಿಸಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ.
ಇಂದಿನ ಮಕ್ಕಳು ಜೀವಮಾನವಿಡಿ ನೆಮ್ಮದಿಯ ಬದುಕು ಕಟ್ಟಲು ವಚನಗಳ ಬಾಯಿ ಪಾಠ ಮಾಡಿ ಅವುಗಳ ಸಾರ ತಿಳಿಯಬೇಕು. ಇಂದಿನ ಮಕ್ಕಳು ಮೌಲ್ಯಗಳ ಉತ್ತರಾಧಿಕಾರಿಗಳಾಗಬೇಕೆ ಹೊರತು ಆಸ್ತಿಯ ವಾರಸುದಾರಿಕೆಯಲ್ಲ ಎಂದು ಡಾ.ಸೋಮಶೇಖರ್ ಹೇಳಿದರು.ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತನ್ನಲ್ಲಿದ್ದ ಮನೆ ಮಾರಿ ವಚನ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸಿ ಜನಮಾನಸಕ್ಕೆ ಭಿತ್ತಿದ ಫ.ಗು.ಹಳಕಟ್ಟಿ ಬಹು ದೊಡ್ಡ ಮಾಣಿಕ್ಯರಾಗಿದ್ದಾರೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಕಲಬೇಡ ಕೊಲಬೇಡ ಎಂಬ ವಚನಗಳ ಸಪ್ತಸೂತ್ರಗಳನ್ನು ಅರಿತು ಶ್ರೇಷ್ಠ ವ್ಯಕ್ತಿತ್ವ ಹೊಂದಲು ಶ್ರೀಗಳು ಕರೆಕೊಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.
ತುಮಕೂರಿನ ಶರಣ ಡಾ.ರಾಘವೇಂದ್ರ, ಡಾ.ಸುರೇಶ್, ಚಿದಾನಂದ, ಸರ್ವಮಂಗಳ ಸೋಮಶೇಖರ್, ಜಿಲ್ಲಾ ಶಸಾಪ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಪರಮೇಶ್ ಇದ್ದರು.
ಬಾಳುಗೋಡು ವಸತಿ ಶಾಲೆಯ ಪ್ರಾಂಶುಪಾಲರೂ ಆದ ಪೊನ್ನಂಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ದಿಲನ್ ಮುತ್ತಣ್ಣ ಸ್ವಾಗತಿಸಿದರು. ಕನ್ನಡ ಶಿಕ್ಷಕಿ ಶೃತಿ ನಿರೂಪಿಸಿದರು.ಸುಜಾತ ವಂದಿಸಿದರು. ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.