ವಚನಾನಂದ ಶ್ರೀ, ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಮೂವರ ಹುನ್ನಾರ

KannadaprabhaNewsNetwork |  
Published : Mar 13, 2026, 01:45 AM IST
12ಎಚ್‌ಆರ್‌ಆರ್‌ 01ಹರಿಹರದ ಶಿವಮೊಗ್ಗ ರಸ್ತೆಯ ಹೊರ ವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಠದ ಆಡಳಿತಾಧಿಕಾರಿ ಡಾ. ರಾಜ್ ಕುಮಾರ್‌ ಹಾಗೂ ಸೋಮಣ್ಣ ಬೇವಿನಮರದ ಮಾತನಾಡಿದರು. | Kannada Prabha

ಸಾರಾಂಶ

ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ಹಾಗೂ ನನ್ನನ್ನು ಆಡಳಿತ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಮೂವರು ಟ್ರಸ್ಟಿಗಳಿಂದ ನಡೆಯುತ್ತಿದೆ. ನನಗೆ ಹಾಗೂ ಶ್ರೀಗಳ ಜೀವಕ್ಕೆ ತೊಂದರೆಯಾದರೆ ಈ ಮೂವರೇ ಕಾರಣ ಎಂದು ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ್ ಹೇಳಿದ್ದಾರೆ.

- ಹರಿಹರದಲ್ಲಿ ಪಂಚಮಸಾಲಿ ಪೀಠ ಆಡಳಿತಾಧಿಕಾರಿ ಡಾ.ರಾಜಕುಮಾರ್ ಆರೋಪ । ಹಲ್ಲೆ ಯತ್ನ ವಿರುದ್ಧ ಗುತ್ತೂರು ಠಾಣೆಯಲ್ಲಿ ದೂರು

- - -

ಕನ್ನಡಪ್ರಭ ವಾರ್ತೆ ಹರಿಹರ

ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ಹಾಗೂ ನನ್ನನ್ನು ಆಡಳಿತ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಮೂವರು ಟ್ರಸ್ಟಿಗಳಿಂದ ನಡೆಯುತ್ತಿದೆ. ನನಗೆ ಹಾಗೂ ಶ್ರೀಗಳ ಜೀವಕ್ಕೆ ತೊಂದರೆಯಾದರೆ ಈ ಮೂವರೇ ಕಾರಣ ಎಂದು ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ್ ಹೇಳಿದರು.

ನಗರದ ಶಿವಮೊಗ್ಗ ರಸ್ತೆಯ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಕಾರ್ಯದರ್ಶಿ ಕೆ.ಎಂ. ಜ್ಯೋತಿಪ್ರಕಾಶ್‌ ಹಾಗೂ ಮತ್ತೋರ್ವ ಧರ್ಮದರ್ಶಿ ಚಂದ್ರಶೇಖರ್‌ ಪೂಜಾರ್‌ ಹುನ್ನಾರ ನಡೆಸುತ್ತಿರುವವರು ಎಂದು ಆರೋಪಿಸಿದರು.

ಪೀಠದ ಗುರುಗಳಾದ ವಚನಾನಂದ ಸ್ವಾಮೀಜಿ ಅವರು ನಯಾ ಪೈಸೆಗೂ ಆಸೆ ಪಡದೇ, ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸುತ್ತಿದ್ದಾರೆ. ತಮಗೆ ಬಂದ ಪಾದಪೂಜೆಯ ಕಾಣಿಕೆ ಹಣವನ್ನೂ ಮಠಕ್ಕೆ ನೀಡಿದ್ದಾರೆ. ಆದರೆ ಕಳೆದ ಮಾ.10ರಂದು ನಡೆಯಬೇಕಿದ್ದ ಟ್ರಸ್ಟ್ ಸಭೆಯಲ್ಲಿ ಶ್ರೀಗಳ ಆಚಾರ ವಿಚಾರದ ಬಗ್ಗೆ ಚರ್ಚೆ ಎಂಬ ವಿಷಯ ಸೇರಿಸುವ ಕಾರ್ಯಕ್ಕೆ ಉಮಾಪತಿಯವರು ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದರು.

ಕನಿಷ್ಠ ಯಾವ ಟ್ರಸ್ಟಿಗಳ ಕೋರಿಕೆ ಮೇಲೆ ಈ ವಿಷಯ ಬಂದಿದೆ. ಕೋರಿಕೆ ಬರಲು ಕಾರಣವೇನು, ಕೋರಿಕೆ ಬಂದಿದ್ದರೆ ಈ ಬಗ್ಗೆ ಸೂಕ್ತ ಕಾನೂನಾತ್ಮಕ ಕ್ರಮವಿಟ್ಟು, ವಿಷಯ ಹಾಕಬೇಕಾಗುತ್ತದೆ. ಜಗದ್ಗುರುಗಳ ವಿಷಯದಲ್ಲಿ ಹಗುರವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಮಾ.6ರಂದು ಅಭಿಪ್ರಾಯ ತಿಳಿಸಿದ್ದೆ. ಆದರೂ ಮಾ.26ರೊಳಗೆ ಅವರನ್ನು ಪೀಠದಿಂದ ಕೆಳಗಿಳಿಸುವ ನಿರ್ಧಾರ ಮಾಡಿದ್ದಾರೆ ಎಂದರು.

ಎರಡೂವರೆ ವರ್ಷಗಳ ಹಿಂದೆ ಮಠದ ಲೆಕ್ಕಪತ್ರದಲ್ಲಿ ಹೆಚ್ಚು ಕಡಿಮೆಯಾಗಿದೆ ಎಂಬ ಕಾರಣದ ಹಿನ್ನೆಲೆ ನನ್ನನ್ನು ಪೀಠದ ಆಡಳಿತಾಧಿಕಾರಿಯಾಗಿ ನೇಮಿಸಿದ್ದರು. ಆದರೆ ಕಾನೂನಾತ್ಮಕವಾಗಿ ನನ್ನ ಬಳಿ ಇರಬೇಕಿದ್ದ ಸಂಘದ ಬೈಲಾ, ಎಲ್ಲ ಸಮಿತಿಗಳ ರಿಜಿಸ್ಟರ್‌, ಟ್ರಸ್ಟ್‌ ನಡವಳಿಕೆ ಪುಸ್ತಕ, ಬ್ಯಾಂಕ್‌ ಪಾಸ್‌ ಬುಕ್‌, ಚೆಕ್‌ ಬುಕ್‌ ಸೇರಿದಂತೆ ಯಾವುದೇ ದಾಖಲೆಗಳನ್ನು ಇದುವರೆಗೆ ನೀಡಿಲ್ಲ. ಟ್ರಸ್ಟ್‌ ಆರ್ಥಿಕ ವ್ಯವಹಾರ ಚೆಕ್‌ ಸೈನಿಂಗ್‌ ಅಥಾರಟಿ ಇದೂವರೆಗೆ ನೀಡಲ್ಲ ಎಂದು ವಿವರಿಸಿದರು.

ಟ್ರಸ್ಟ್‌ನ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಂದಿದೆ, ಇನ್ನೂ ಬರಬೇಕಿದೆ. ಸಚಿವರು, ಶಾಸಕರು, ಜನಸಾಮಾನ್ಯರಿಂದ ಕೋಟ್ಯಂತರ ಹಣ ಹರಿದುಬಂದಿದೆ. ಪೀಠದ ಯಾತ್ರಿ ನಿವಾಸ ಮತ್ತು ವಿದ್ಯಾರ್ಥಿ ನಿಲಯಗಳ ಕಾಮಗಾರಿ ಸ್ಥಗಿತಗೊಂಡಿವೆ. ಆದರೂ ನಮ್ಮ ಮಠ ಪ್ರಧಾನ ಧರ್ಮದರ್ಶಿಗಳ ಬಳಿ ₹80 ಲಕ್ಷ ಸಾಲದಲ್ಲಿ ಇದ್ದೇವೆ ಎನ್ನುತ್ತಾರೆ. ಪೀಠದ ಭಕ್ತರ ಆಶಯದ ಮೇಲೆ ಟ್ರಸ್ಟ್‌ನ 2008ರಿಂದ ಲೆಕ್ಕಪತ್ರಗಳನ್ನು ಕೇಳಿದ್ದ ಕಾರಣ ಮೊನ್ನೆ ಮಾ.10ರಂದು ನಡೆದ ಸಭೆಯಲ್ಲಿ ನನ್ನ ಮೇಲೆಯೇ ಹಲ್ಲೆ ಪ್ರಯತ್ನ, ಪೀಠೋಪಕರಣ ಹಾಳು ಮಾಡುವ ಯತ್ನ ನಡೆದಿವೆ. ಇವೆಲ್ಲ ಗೊತ್ತಾಗಬಾರದು ಎಂದೇ ಸಿಸಿ ಟಿವಿಯ ಡಿವಿಡಿ ಸಹ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಗುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.

ಶ್ರೀಮಠದ ದಾಸೋಹ ಸಮಿತಿ ಅಧ್ಯಕ್ಷ, ದಾವಣಗೆರೆಯ ನ್ಯಾಯವಾದಿ ಪ್ರಕಾಶ ಪಾಟೀಲ, ಹರಿಹರದ ಎಚ್.ಪಿ. ಬಾಬಣ್ಣ, ರಾಣೆಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರಸಭೆಯ ಮಾಜಿ ಸದಸ್ಯ ರಾಜಣ್ಣ ಮೂಟಗಿ, ಮುಖಂಡರಾದ ಸಿದ್ದು ಚಿಕ್ಕಬಿದರಿ, ರಾಜಣ್ಣ ಬುಡ್ದನಗೌಡರ, ಎನ್.ಡಿ. ಪಾಟೀಲ, ದಾವಣಗೆರೆಯ ಜೆ.ಎಸ್. ಚನ್ನಬಸಪ್ಪ, ಬಿ.ಸಿ. ಹನುಮಗೌಡ್ರ, ಡಾ. ವೀರಾಪೂರ್‌, ಶಂಕರಗೌಡ, ಹಾವೇರಿಯ ಡಾ. ಬಸವರಾಜ ವೀರಾಪುರ, ಸೋಮಣ್ಣ ಉಪಸ್ಥಿತರಿದ್ದರು.

- - -

(ಬಾಕ್ಸ್‌-1) * ₹15 ಕೋಟಿ ಹಣದ ಲೆಕ್ಕ ಕೊಡೋವರೆಗೂ ಚಳವಳಿ: ಸೋಮಣ್ಣ ಬೇವಿನಮರದ ಗಡಿನಾಡು ಪ್ರಾಧಿಕಾರ ಅಧ್ಯಕ್ಷ, ವಿಶೇಷ ಆಹ್ವಾನಿತರಾಗಿದ್ದ ಸೋಮಣ್ಣ ಬೇವಿನಮರದ ಮಾತನಾಡಿ, ರಾಜ್ಯದ ಬಳ್ಳಾರಿ, ಹೊಸಪೇಟೆ, ಹರಿಹರ, ದಾವಣಗೆರೆ, ಹಿರೇಕೆರೂರು, ಶಿಗ್ಗಾವಿಯಲ್ಲಿ ಶ್ರೀಪೀಠದ ಹೆಸರಿಗೆ ಆಸ್ತಿಗಳಿವೆ. ಅವುಗಳನ್ನು ಹಾಗೂ ಶ್ರೀ ಪೀಠದ ಟ್ರಸ್ಟ್ ಹೆಸರಿನಲ್ಲಿನ ಬ್ಯಾಂಕ್ ಪಾಸ್‌ ಬುಕ್, ಠರಾವು ಪುಸ್ತಕ, ರಸೀದಿ ಬುಕ್ ಮಠದಲ್ಲಿ ಇಲ್ಲ. ಬಿ.ಸಿ.ಉಮಾಪತಿ ಮನೆಯಲ್ಲಿವೆ. ನಾನು ಹಾಗೆ ಮಾಡಿಲ್ಲ. ಮಠಕ್ಕೆ ಸರ್ಕಾರ, ಸಚಿವರು ಹಾಗೂ ಭಕ್ತರಿಂದ ನೂರಾರು ಕೋಟಿ ರು. ಹರಿದುಬಂದಿದೆ. ಅದರಲ್ಲಿ ಸುಮಾರು ₹15 ಕೋಟಿ ಅವ್ಯವಹಾರ ಆಗಿದೆ. ಆದ್ದರಿಂದ ಲೆಕ್ಕ ಕೊಡಿ ಚಳವಳಿ ಆರಂಭಿಸಲಿದ್ದೇವೆ. ಲೆಕ್ಕ ಕೊಡುವವರೆಗೆ ನಮ್ಮ ಚಳವಳಿ ನೀಡುವುದಿಲ್ಲ ಎಂದು ಎಚ್ಚರಿಸಿದರು.

- - -

(ಬಾಕ್ಸ್‌-2) * ಹೊನ್ನಾಳಿ ಭಕ್ತನ ರಂಪಾಟ ಸುದ್ದಿಗೋಷ್ಠಿ ನಡೆಯುವಾಗ ಮಠದ ಹೊನ್ನಾಳಿಯ ಭಕ್ತ ಎನ್ನಲಾದ ಪ್ರಶಾಂತ ಪೇಟೆ ಎಂಬಾತ ಬಿ.ಸಿ. ಉಮಾಪತಿ ಅವರೇ ನಮ್ಮ ಪೀಠದ ಧರ್ಮದರ್ಶಿಗಳು. ಅವರಿಲ್ಲದೇ ಸಭೆ ನಡೆಯುತ್ತಿರುವುದು ಸರಿ ಅಲ್ಲ. ಶಿಗ್ಗಾವಿಯಲ್ಲಿ ಮಾಜಿ ಸಿಎಂ ಶ್ರೀ ಪೀಠಕ್ಕೆ ನೀಡಿದ 2 ಎಕರೆ ಜಮೀನನ್ನು ಸೋಮಣ್ಣ ಬೇವಿನಮರದ ಅವರ ಹೆಸರಿಗೆ ಬರೆಯಲಾಗಿದೆ ಎಂದು ಆರೋಪಿಸಿ, ಭಾರಿ ಗದ್ದಲಕ್ಕೆ ಕಾರಣರಾದರು.

- - -

-12ಎಚ್‌ಆರ್‌ಆರ್‌ 01:

ಹರಿಹರದ ಶಿವಮೊಗ್ಗ ರಸ್ತೆಯ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ್‌ ಹಾಗೂ ಸೋಮಣ್ಣ ಬೇವಿನಮರದ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಾಶ್ರಿತರಿಗೆ ವಾತ್ಸಲ್ಯ ತುಂಬುವ ಕೆಲಸವಾಗಬೇಕು: ಮಲ್ಲಿಕಾರ್ಜುನ್
ಹಾವಿನಮಾರನಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಪ್ರತಿಭಟನೆ