ಕನ್ನಡಪ್ರಭ ವಾರ್ತೆ, ತುಮಕೂರುವಚನಗಳು ಕನ್ನಡ ಸಾಹಿತ್ಯದ ಒಂದು ಪ್ರಕಾರವಾಗಿರದೆ ಅವುಗಳು ಕನ್ನಡಿಗರ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಎಂದು ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ಅವರು ಬಸವಕೇಂದ್ರ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ನಗರದ ಜಯದೇವ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪನ್ಯಾಸದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಚಲನಶೀಲ ಪರಂಪರೆಯಾಗಿ ಬೆಳೆದಿರುವ ಈ ವಚನಗಳು 12ನೇ ಶತಮಾನದ ಚಿನ್ನದ ಬೆಳೆಯಾಗಿವೆ. ಇವು ಕೇವಲ ವ್ಯವಹಾರಿಕ ಮಾತುಗಳಾಗಿರದೆ, ಸ್ವರ್ಗದ ಸೆಲೆಗಿಂತ ಮಿಗಿಲಾದವುಗಳು. ಇಂದು ಭವ ಸಾಗರದಲ್ಲಿ ಮುಳುಗದೆ ಒಬ್ಬ ವ್ಯಕ್ತಿ ತೇಲಬೇಕಾದರೆ ಶರಣರ ವಚನಗಳ ಅಧ್ಯಯನದಿಂದ ಮಾತ್ರ ಸಾಧ್ಯ ಎಂದರು.ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡ ಶರಣರು ಅಂಗದ ಮೇಲೆ ಲಿಂಗವನ್ನು ಧರಿಸಿ ಅಸಮಾನತೆಯಿಂದ ತುಂಬಿಹೋಗಿದ್ದ ಅಂದಿನ ಸಮಾಜದಲ್ಲಿ ಬಯಸಿದವರಿಗೆ ಇಷ್ಟಲಿಂಗವನ್ನು ನೀಡುವುದರ ಮೂಲಕ ಸಮಾನತೆಯ ಸಮಾಜವನ್ನು ಕಟ್ಟಲು ಬಯಸಿದರು. ಅಂಗವನ್ನು ದೈವೀಕರಿಸಿದ ಶರಣರು ನಂತರ ದೈವತ್ವವನ್ನೇ ಸಾಮಾಜೀಕರಣಗೊಳಿಸಿ ದಾಸೋಹ ಎಂಬ ನೂತನ ಪರಿಕಲ್ಪನೆಯನ್ನು ಹುಟ್ಟುಹಾಕಿದ ಐತಿಹಾಸಿಕ ಮಹಾಪುರುಷರೆಂದು ಬಣ್ಣಿಸಿದರು.ವಚನಕಾರರು ವೈಜ್ಞಾನಿಕವಾಗಿ ಚಿಂತನೆ ನಡೆಸಿದವರು. ಅವರ ವಚನಗಳಲ್ಲಿ ಸಾರ್ವಕಾಲಿಕ ಸತ್ಯವಿದೆ. ಅವರ ಅನುಭಾವಿಕ ನುಡಿಗಳನ್ನು ಮನೆ ಮನೆಗಳಿಗೆ ತಲುಪಿಸುವುದಕ್ಕಿಂತ ಹೆಚ್ಚಾಗಿ ವ್ಯಕ್ತಿಯ ಮನಗಳಿಗೆ ಮುಟ್ಟಿಸಬೇಕಾಗಿದೆ. ಇದರಿಂದ ಬಸವಪ್ರಜ್ಞೆಯನ್ನು ಜಾಗೃತಗೊಳಿಸಬಹುದು. ಇದನ್ನು ತುಮಕೂರಿನಲ್ಲಿ ಮಾಡುತ್ತಿರುವ ಬಸವಪರ ಸಂಘಟನೆಗಳನ್ನು ಅಭಿನಂದಿಸಿದರು. ವಿಶೇಷ ಉಪನ್ಯಾಸ ನೀಡಿದ ಮೈಸೂರಿನ ಶರಣತತ್ವ ಚಿಂತಕ ಶಿವಶಂಕರಯ್ಯನವರು ಮಾತನಾಡಿ, ಬಸವಾದಿ ಶರಣರು ಸತ್ಯ ಶುದ್ಧ ಕಾಯಕವ ಪರಿಕಲ್ಪನೆಯನ್ನು ಪ್ರತಿಪಾದಿಸಿ ಆ ಕಾಯಕವು ಸಾರ್ಥಕತೆ ಪಡೆಯಬೇಕಾದರೆ ದಾಸೋಹದಿಂದ ಮಾತ್ರ ಸಾಧ್ಯ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. ಶರಣನಾದವನು ಹೆಚ್ಚಿನ ಸಂಗ್ರಹಕ್ಕೆ ಆದ್ಯತೆ ನೀಡದೆ ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ಅರ್ಪಿಸಿ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕು. ಹೀಗೆ ಮಾಡುವುದರ ಮೂಲಕ ಬಸವಾದಿ ಶರಣರಿಗೆ ಗೌರವ ನೀಡಿದಂತೆ ಎಂದು ತಿಳಿಸಿದರು.ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಬಸವಾದಿ ಶರಣರ ಉದಾರ ತತ್ವಗಳನ್ನು ನಂಬಿಕೊಂಡು ಜ್ಞಾನಾಧಾರಿತ ಶ್ರೇಣೀಕರಣ ಬಯಸಿದ್ದ ಸಮಾಜವು ಇಂದು ಅನೇಕ ಉಪಜಾತಿಯಾಧಾರಿತ ಶ್ರೇಣೀಕರಣಕ್ಕೆ ವಾಲಿರುವುದು ಅತ್ಯಂತ ದುರ್ದೈವದ ಸಂಗತಿ. ಲಿಂಗಧಾರಿಗಳನ್ನು ಪ್ರಾಚೀನತೆಯ ವ್ಯಾಮೋಹದ ಬಲೆಯಲ್ಲಿ ಸಿಲುಕಿಸಿ ಶುದ್ಧ ಶೈವದ ಧಾರ್ಮಿಕ ಕಕ್ಷೆಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಬಸವಾನುಯಾಯಿಗಳು ಇದರ ಬಗ್ಗೆ ಎಚ್ಚರಿಕೆಯಿಂದ ಇದ್ದು ಬಸವ ಪ್ರಜ್ಞೆಯನ್ನು ಎಲ್ಲೆಡೆ ಬೆಳೆಸಬೇಕಾಗಿದೆ ಎಂದರು.ವೇದಿಕೆಯಲ್ಲಿ ಕೈಗಾರಿಕೋದ್ಯಮಿ ಡಿ.ವಿ.ಶಿವಾನಂದ್, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ನ ರಾಮಕೃಷ್ಣಪ್ಪ, ಡಾ. ಬಿ.ಸಿ.ಶೈಲಾ ನಾಗರಾಜು ಉಪಸ್ಥಿತರಿದ್ದರು. ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ನಾಗಭೂಷಣ್ ಸ್ವಾಗತಿಸಿದರು, ಟಿ.ಕಲ್ಪನಾ ಉಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಭವಾನಮ್ಮ ಗುರುಮಲ್ಲಪ್ಪ ವಂದಿಸಿದರು, ಆಶಾ ನಿರಂಜನ್ ನಿರೂಪಿಸಿದರು.