ಸಂಡೂರು: ಬಸವಾದಿ ಶರಣರದ್ದು ವೈಚಾರಿಕ ಭಕ್ತಿ. ಭಕ್ತಿಯ ತಳಹದಿಯ ಮೇಲೆ ಸುಂದರ ಸಮಸಮಾಜ ನಿರ್ಮಾಣಕ್ಕೆ ವಚನಕಾರರು ಶ್ರಮಿಸಿದರು ಎಂದು ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಅಭಿಪ್ರಾಯಪಟ್ಟರು.
ವಚನ ಸಾಹಿತ್ಯದ ಜೀವಾಳವೇ ಭಕ್ತಿಯಾಗಿದೆ. ಭಕ್ತಿ ಎಂಬುದು ಭಕ್ತನನ್ನು ಭಗವಂತನೊಂದಿಗೆ ಬೆಸೆಯುವ ಒಂದು ಸೇತುವೆಯಾಗಿದೆ. ನಿಸ್ವಾರ್ಥ ಹಾಗೂ ನಿಷ್ಕಲ್ಮಷ ಭಕ್ತಿಯನ್ನು ವಚನಕಾರರು ಪ್ರತಿಪಾದಿಸಿದರು. ಆ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಭಕ್ತಿಗೆ ಗುರು, ಜ್ಞಾನ ಹಾಗೂ ಅನುಭಾವ ಎಂಬ ಮೂರು ಲಕ್ಷಣಗಳಿವೆ. ಭಕ್ತಿ ಎಂಬುದು ಒಂದು ಶಕ್ತಿ. ಭಾರತದ ಭಕ್ತಿ ಪರಂಪರೆಗೆ ವಚನಕಾರರ ಭಕ್ತಿ ಪರಂಪರೆ ಮಹತ್ವದ ಕಾಣಿಕೆ ನೀಡಿದೆ. ಜ್ಞಾನ ಹಾಗೂ ಭಕ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಚನಕಾರರ ಭಕ್ತಿ, ಆದರ್ಶಗಳನ್ನು ನಾವು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಒಟ್ಟಾಗಿ ಶ್ರಮಿಸೋಣ ಎಂದರು.
ಸಾನ್ನಿಧ್ಯವಹಿಸಿದ್ದ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಸುತ್ತೂರು ಶ್ರೀಗಳು ಬಹು ದೊಡ್ಡ ಕನಸುಗಾರರು. ಶರಣ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕುವ ಮೂಲಕ ಶರಣ ಸಾಹಿತ್ಯವನ್ನು ಜಗತ್ತಿಗೆ ಪಸರಿಸಲು ಶ್ರಮಿಸಿದರು ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ನೀಲಾಂಬಿಕಾ ಹಾಗೂ ತಾಲೂಕು ಘಟಕದ ಅಧ್ಯಕ್ಷೆ ಕುಸುಮಾ ಹಿರೇಮಠ್ ಭಾಗವಹಿಸಿದ್ದರು. ಟಿ. ವೆಂಕಟೇಶ ಹಾಗೂ ಕೆ. ಉಮೇಶ್ ಆಚಾರ್ ಅವರು ಸಂಗೀತ ಸೇವೆಗೈದರು. ಎಚ್. ವೀರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ. ಕುಮಾರಸ್ವಾಮಿ ಸ್ವಾಗತಿಸಿದರು. ಎ.ಎಂ. ಶಿವಮೂರ್ತಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎಂ. ಮಹಾಂತೇಶ್ ವಂದಿಸಿದರು.
ಬಿಕೆಜಿ ಫೌಂಡೇಷನ್ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಸಿ.ಎ. ಶಿಗ್ಗಾವಿ, ಬಪ್ಪಕಾನ್ ಕುಮಾರಸ್ವಾಮಿ, ಬಸವರಾಜ ಮಸೂತಿ, ಹಗರಿ ಬಸವರಾಜಪ್ಪ, ಜಗದೀಶ್ ಬಸಾಪುರ, ಗುಡೆಕೋಟೆ ನಾಗರಾಜ, ಎಂ.ಪಿ.ಎಂ. ಸುರೇಂದ್ರನಾಥ್, ಮೇಟಿ ಕುಮಾರಸ್ವಾಮಿ, ವೆಂಕಟಸುಬ್ಬಯ್ಯ, ಚಂದ್ರಶೇಖರಪ್ಪ, ಬಿಕೆಜಿ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.