
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ವಿವಿಧ ಬಡಾವಣೆಗಳಲ್ಲಿರುವ ಹಾಗೂ ಜಿಲ್ಲೆಯ ವಿವಿಧೆಡೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಜಿಲ್ಲೆಯಾದ್ಯಂತ ಇರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ, ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀ ವಿಷ್ಣು ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.
ನಗರದ ಮಧುಗಿರಿ ರಸ್ತೆಯ ವೆಂಕಟೇಶಪುರದಲ್ಲಿರುವ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ಭಕ್ತ ಮಂಡಳಿಯಿಂದ ವೈಭವದ ವೈಕುಂಠ ಏಕಾದಶಿ ಆಚರಿಸಿ, ಭೂವರಾಹಸ್ವಾಮಿ ಮತ್ತು ಅಷ್ಟಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.ಬಟವಾಡಿಯ ವೆಂಕಟೇಶ್ವರ ಸ್ವಾಮಿ ದೇವಾಲಯ, ಸಿರಾಗೇಟ್ ಸಮೀಪವಿರುವ ಶ್ರೀ ವೆಂಕಟೇಶ್ವಸ್ವಾಮಿ ದೇವಾಲಯ, ಜಯನಗರ ರಿಂಗ್ ರಸ್ತೆಯ ತಿರುಮಲ ನಗರ ದಕ್ಷಿಣದ ಕೆ.ಎಚ್.ಬಿ. ಕಾಲೋನಿಯಲ್ಲಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಸರಸ್ವತಿಪುರಂನ ವೆಂಕಟೇಶ್ವರ ಸ್ವಾಮಿ ದೇಗುಲ, ಜಯನಗರ ಪಶ್ಚಿಮದ ಪದ್ಮಾವತಿ ವೆಂಕಟೇಶ್ವರಸ್ವಾಮಿ ದೇವಾಲಯ, ಟಿಜಿಎಂಸಿ ಬ್ಯಾಂಕ್ ಮುಂಭಾಗದ ಮಹಾಲಕ್ಷ್ಮಿ ದೇವಾಲಯ, ಸೋಮೇಶ್ವರ ಪುರಂನ ಗೋಪಾಲಕೃಷ್ಣ ದೇವಾಲಯ, ಶಾಂತಿನಗರದ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯ, ತುರುವೇಕೆರೆ ತಾಲೂಕಿನ ಮುದುಗೆರೆ ಸಮೀಪದ ಶ್ರೀ ಕೋಡಿ ರಂಗನಾಥಸ್ವಾಮಿ ದೇವಾಲಯ, ಸಂಪಿಗೆಯ ವೆಂಕಟೇಶ್ವರ ಸ್ವಾಮಿ ದೇವಾಲಯ ಹಾಗೂ ಗುಬ್ಬಿಯ ಬೇಟೆರಾಯಸ್ವಾಮಿ ದೇವಾಲಯ, ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಂಗಳವಾರ ಮುಂಜಾನೆಯಿಂದಲೇ ಭಕ್ತಾದಿಗಳು ವೆಂಕಟೇಶ್ವರ ಸ್ವಾಮಿ ದೇವಾಲಯಗಳಿಗೆ ತೆರಳಿ ಸರದಿಯ ಸಾಲಿನಲ್ಲಿ ನಿಂತು ವೈಕುಂಠ ದರ್ಶನದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಪಂಚಾಮೃತ ಅಭಿಷೇಕ, ಅಲಂಕಾರ, ಉಯ್ಯಾಲೆ ಸೇವೆ, ಪ್ರಕಾರೋತ್ಸವಗಳು ನೆರವೇರಿದವು.
ಭಕ್ತಾದಿಗಳು ಸಹ ಮುಂಜಾನೆಯಿಂದಲೇ ದೇವಾಲಯಗಳಿಗೆ ತೆರಳಿ ಸರದಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಈ ಎಲ್ಲ ದೇವಾಲಯಗಳಲ್ಲೂ ಭಕ್ತಾದಿಗಳಿಗೆ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಗರದ ವಿವಿಧ ಬಡಾವಣೆಗಳಲ್ಲಿರುವ ವೆಂಕಟೇಶ್ವರಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜಾದಿಗಳು ನೆರವೇರಿದ್ದು, ಭಕ್ತರಿಗೆ ವೈಕುಂಠ ಏಕಾದಶಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.