ರಾಜ್ಯಾದ್ಯಂತ ಭಕ್ತಿ ಭಾವದ ವೈಕುಂಠ ಏಕಾದಶಿ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ರಾಜ್ಯಾದ್ಯಂತ ಶನಿವಾರ ಭಕ್ತಿ ಸಡಗರದಿಂದ ವೈಕುಂಠ ಏಕಾದಶಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಾದ್ಯಂತ ಶನಿವಾರ ವೈಕುಂಠ ಏಕಾದಶಿಯನ್ನು ಭಕ್ತಿ, ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಆಚರಣೆಯ ಅಂಗವಾಗಿ ವೆಂಕಟೇಶ್ವರನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.

ದೇವಾಲಯಗಳಲ್ಲಿ ಪುಷ್ಪಯಾಗ, ಅಷ್ಟಾವಧಾನ ಸೇವೆ, ನಾಮತ್ರಯ ಮಹಾಮಂತ್ರ ಜಪಯಜ್ಞ, ಸುಪ್ರಭಾತ ಸೇವೆ, ಅಷ್ಟಾಕ್ಷರಿ ಮಂತ್ರಜಪ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣಗಳು ನಡೆದವು. ಏಕಾದಶಿ ಅಂಗವಾಗಿ ಭಕ್ತರು ಉಪವಾಸ ವ್ರತಾಚರಣೆ ಕೈಗೊಂಡು, ತಮ್ಮ ಮನೆಗಳಲ್ಲಿ ದೇವರ ಮುಂದೆ ದೀಪ ಬೆಳಗಿಸಿ, ಶ್ರೀಹರಿಗೆ ತುಳಸಿ ದಳ ಅರ್ಪಿಸಿ, ವಿಷ್ಣು ಸಹಸ್ರನಾಮ, ಶ್ರೀಹರಿ ಸ್ತೋತ್ರ ಪಠಿಸಿ, ವಿಶೇಷ ಪೂಜೆ ನೆರವೇರಿಸಿದರು.

ಬೆಂಗಳೂರಿನಲ್ಲಿ ವೈಯಾಲಿಕಾವಲ್‌ನ ಶ್ರೀವೆಂಕಟೇಶ್ವರ ಸ್ವಾಮಿ, ಇಸ್ಕಾನ್‌ ಸೇರಿ ವಿಷ್ಣು ದೇವಾಲಯಗಳಿಗೆ ಲಕ್ಷಾಂತರ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಲಡ್ಡು ಪ್ರಸಾದ ಸ್ವೀಕರಿಸಿದರು. ವೈಯಾಲಿಕಾವಲ್‌ ನ ಟಿಟಿಡಿ ವೆಂಕಟೇಶ್ವರ ದೇವಾಲಯವನ್ನು ತಿರುಪತಿ ಮಾದರಿಯಲ್ಲಿ ರೂಪಿಸಿ ತಳಿರು ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ತಿರುಪತಿ ಲಡ್ಡು ರೀತಿಯಲ್ಲೆ ಪ್ರಸಾದ ವಿತರಣೆ ಮಾಡಲಾಯಿತು.

ಇಸ್ಕಾನ್‌ನ ಹರೇ ಕೃಷ್ಣಗಿರಿಯ ಶ್ರೀನಿವಾಸ ಗೋವಿಂದ ಹಾಗೂ ವೈಕುಂಠ ಗಿರಿಯ ರಾಜಾಧಿರಾಜ ಗೋವಿಂದರಿಗೆ ಶನಿವಾರ ನಸುಕಿನ 3 ಗಂಟೆಯಿಂದ ಸುಪ್ರಭಾತ ಸೇವೆ ಆರಂಭವಾಯಿತು. ದೇವರಿಗೆ ಹೊಸ ವಸ್ತ್ರ ಹಾಗೂ ಸುಗಂಧಭರಿತ ಹೂ ಮಾಲೆಗಳಿಂದ ಭವ್ಯ ಅಲಂಕಾರ ಮಾಡಲಾಗಿತ್ತು. ದಿನವಿಡೀ ಎರಡೂ ದೇವಾಲಯಗಳಲ್ಲಿ ಶ್ರೀಕೃಷ್ಣನ 1 ಲಕ್ಷ ನಾಮಸ್ಮರಣೆಯೊಂದಿಗೆ ವಿವಿಧ ಭಕ್ತರು ಲಕ್ಷಾರ್ಚನೆ ಸೇವೆಯನ್ನು ಸಲ್ಲಿಸಿದರು. ಎರಡೂ ಕಡೆ ಸೇರಿ 80 ಸಾವಿರಕ್ಕೂ ಹೆಚ್ಚು ಲಡ್ಡುಗಳೊಂದಿಗೆ ಬರ್ಫಿ, ಮೈಸೂರು ಪಾಕ್, ಹೋಳಿಗೆ, ನಿಪ್ಪಟ್ಟು ಇತ್ಯಾದಿ ಖಾದ್ಯಗಳನ್ನು ವಿತರಿಸಲಾಯಿತು.

ಮಂತ್ರಾಲಯದಲ್ಲಿ ಶ್ರೀನಿವಾಸನ ದೇವಸ್ಥಾನಕ್ಕೆ ತೆರಳಿದ ಸುಬುಧೇಂದ್ರ ತೀರ್ಥರು, ಮಂಗಳಾರತಿ ನೆರವೇರಿಸಿ, ವೈಕುಂಠ ದ್ವಾರ ತೆಗೆದರು. ಇದೇ ವೇಳೆ, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ, ಶಿವಮೊಗ್ಗದ ನವಲೆ ಬೆಟ್ಟದ ವೆಂಕಟರಮಣ ಸ್ವಾಮಿ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿ ಸೇರಿ ರಾಜ್ಯಾದ್ಯಂತದ ಶ್ರೀಹರಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.

Share this article