ಬೆಂಗಳೂರು : ಭಕ್ತಿ ಭಾವ, ಸಂಭ್ರಮ ಸಡಗರದೊಂದಿಗೆ ನಗರದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಸಂಭ್ರಮ ಜೋರಾಗಿತ್ತು. ನಸುಕಿನಿಂದಲೇ ಭಕ್ತರು ವೆಂಕಟೇಶ್ವರ ಸ್ವಾಮಿ ಸೇರಿ ನಗರದ ವಿವಿಧ ದೇವಸ್ಥಾನಗಳಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ವೆಂಕಟೇಶ್ವರ, ಲಕ್ಷ್ಮೀ ನರಸಿಂಹ ಸೇರಿದಂತೆ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಮಹಾಭಿಷೇಕ, ಪುಷ್ಪಾಲಂಕಾರ, ವಿದ್ಯುತ್ ದೀಪಾಲಂಕಾರ, ಭಜನೆ, ನಾಮಸ್ಮರಣೆ, ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತಾದಿಗಳಿಗಾಗಿ ತೀರ್ಥ, ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿತ್ತು. ಏಕಾದಶಿ ಉಪವಾಸ ವ್ರತ ನೆರವೇರಿಸಿದ ಭಕ್ತರು, ಗೋವಿಂದನ ನಾಮಸ್ಮರಣೆ ಮಾಡಿ ಪುನಿತರಾದರು.
ಮಲ್ಲೇಶ್ವರದಲ್ಲಿರುವ ತಿರುಪತಿ ತಿರುಮಲ ದೇಗುಲದಲ್ಲಿ ಸಾವಿರಾರು ಭಕ್ತರು ನಸುಕಿನ 3 ಗಂಟೆಯಿಂದಲೇ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದರು. 3 ಗಂಟೆಗೆ ವಿಶೇಷ ಪೂಜೆ ನೆರವೇರಿಸಿ 3.30ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಆಂಧ್ರ ಪ್ರದೇಶದ ತಿರುಪತಿ ತಿರುಮಲದಲ್ಲಿ ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ವ್ಯವಸ್ಥೆ ಕಲ್ಪಿಸಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ದೇವಸ್ಥಾನದಲ್ಲಿ 20 ಸಾವಿರ ಲಡ್ಡು ಮಾರಾಟ ವ್ಯವಸ್ಥೆ ಮಾಡಲಾಗಿತ್ತು ಎಂದು ಟಿಟಿಡಿ ಸಿಬ್ಬಂದಿ ಮಾಹಿತಿ ನೀಡಿದರು.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇಗುಲದಲ್ಲಿ ಬೆಳಗ್ಗೆ 3.45ರಿಂದ ವಿಶೇಷ ಪೂಜೆ, ಅರ್ಚನೆ, ಮಹಾಭಿಷೇಕ ಸೇರಿದಂತೆ ಪೂಜಾ ಕಾರ್ಯಗಳು ನೆರವೇರಿದವು. ಭಕ್ತರಿಗೆ ಲಡ್ಡು, ಪೊಂಗಲ್ ಪ್ರಸಾದ ವಿತರಿಸಲಾಯಿತು.
ಮಲ್ಲೇಶ್ವರದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ರಾಜಾಜಿ ನಗರದ ಕೈಲಾಸ ವೈಕುಂಠ ಮಹಾಕ್ಷೇತ್ರ ದೇವಸ್ಥಾನ, ಕಲಾಸಿಪಾಳ್ಯ ಕೋಟೆ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಾಗಡಿ ರಸ್ತೆ ರೈಲ್ವೆ ವಸತಿಗೃಹ ವೆಂಕಟೇಶ್ವರ ದೇಗುಲದಲ್ಲಿ ಆಯೋಧ್ಯೆಯ ಶ್ರೀರಾಮನಂತೆ ವೆಂಕಟೇಶ್ವರ ಸ್ವಾಮಿಯನ್ನು ಅಲಂಕರಿಸಲಾಗಿತ್ತು.
ಗಣ್ಯರಿಂದ ದರ್ಶನ:ಮಲ್ಲೇಶ್ವರದ ಟಿಟಿಡಿ ವೆಂಕಟೇಶ್ವರ ದೇವಸ್ಥಾನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಅಶ್ವಿನಿ ಪುನಿತ್ ರಾಜ್‌ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು.
ವೈಕುಂಠ ಏಕಾದಶಿಯ ವಿಶೇಷ ದಿನದಂದು ವೆಂಕಟೇಶ್ವರ ದರ್ಶನ ಮಾಡಿದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಹೀಗಾಗಿ, ಜನರು ಈ ದಿನ ದೇವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಾರೆ.
ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ